Monday, December 17, 2018

ಬನ್ರೀ ಅಂಗೇ ಹೋಗಿಬರುಮಾ - ೩ಕೆ ಸಡಗರ ಸಂಭ್ರಮ ಸಂತಸ ೨೦೧೮

"ಯಾರಿ.. ಬನ್ರಪ್ಪ.. ಬೇಗ ಬನ್ರಪ್ಪ.. ನಿಮಗೇನು ಅರಿಶಿನ ಕುಂಕುಮ ಕೊಟ್ಟು ಕರೀಬೇಕಾ.. ಬನ್ರೀ ಹತ್ತಿ.. " ಬಸ್ ಸ್ಟಾಪಿನಲ್ಲಿದ್ದವ ಕೂಗುತಿದ್ದ.. ಹತ್ತಬೇಕೆಂದು ಮೊದಲೇ ಬುಕ್ ಮಾಡಿದ್ದವರು ಲಘುಬಗೆಯಿಂದ ಬಸ್ಸಿನೊಳಗೆ ಆಗಲೇ ನಿರ್ಧಾರಿತ ಸೀಟಿನಲ್ಲಿ ಕುಳಿತಾಗಿತ್ತು.. ಇನ್ನೊಂದಷ್ಟು ಸೀಟುಗಳು ಖಾಲಿ ಇದ್ದವು.. ಅದೇನು ಚಿಕ್ಕ ಬಸ್ಸಲ್ಲ ಸುಮಾರು ೧೦೦-೧೨೦ ಮಂದಿಗೆ ಆಸನದ ವ್ಯವಸ್ಥೆ ಇದ್ದ ಬಸ್ಸದು..

ಡ್ರೈವರ್ ಪೊಂ ಪೊಂ ಅಂತ ಹಾರ್ನ್ ಮಾಡುತ್ತಲೇ.. ಬಸ್ಸು ಮೆಲ್ಲಗೆ ಮುಂದೆ ಸಾಗಲು ಹವಣಿಸುತ್ತಿತ್ತು.. ಬಸ್ ನಿಲ್ದಾಣದಲ್ಲಿದ್ದ ಇನ್ನಷ್ಟು ಮಂದಿ ಬಸ್ಸಿನೊಳಗೆ ನುಗ್ಗಿದರು.. ಬಸ್ಸು ಈಗ ಜೇನಿನ ಗೂಡಾಗಿತ್ತು.. ಒಬ್ಬರಿಗೊಬ್ಬರು.. ಒಬ್ಬರಿಂದ ಒಬ್ಬರು ಎನ್ನುವ ನೀತಿಪಾಠ ಕೇಳಿಕೊಂಡೆ.. ಅದನ್ನು ತಮ್ಮ ಜೀವನದಲ್ಲಿಯೇ ಅಳವಡಿಸಿಕೊಂಡವರು ಇದ್ದುದರಿಂದ.. ತೊಂದರೆ ಇರಲಿಲ್ಲ..


ಸರಿ ಬಸ್ಸು ಹೊರಟಿತು.. ಅಲ್ಲಿದ್ದ ಒಬ್ಬ ಸಹಚಾಲಕ "ನೋಡ್ರಪ್ಪಾ..ಎಲ್ಲರಿಗೂ ಸೀಟ್ ಬೆಲ್ಟ್ ಹಾಕಿಕೊಳ್ಳಿ.. ನಿಮ್ಮ ಕೈಗಡಿಯಾರವನ್ನು ಕೊಂಚ ಹಿಂದಕ್ಕೆ ತಿರುಗಿಸಿ ಮತ್ತೆ ಒಮ್ಮೆ ಒತ್ತಿಬಿಡಿ.. ನಿಮ್ಮ ಮೊಬೈಲನ್ನು ಆನ್ ಮಾಡಿದರೂ ಆಫ್ ಮಾಡಿದರೂ ವ್ಯತ್ಯಾಸವಿಲ್ಲ ಕಾರಣ ಅಲ್ಲಿ ನೆಟ್ವರ್ಕ್ ಸಿಗೋಲ್ಲ.. ನೆಟ್ವರ್ಕ್ ಸಿಕ್ಕರೂ ನೀವೇ ಮಾತಾಡೋಲ್ಲ.. ನಿಮ್ಮ ನಿಮ್ಮ ಬೂಟುಗಳನ್ನು ಇಲ್ಲಿಯೇ ಬಿಟ್ಟು ಬನ್ನಿ.. ಅಲ್ಲಿ ಪಾದರಕ್ಷೆಗಳಿಗೆ ಪ್ರವೇಶವಿಲ್ಲ"


ಎಲ್ಲರೂ ಒಮ್ಮೆ ಅಕ್ಕ ಪಕ್ಕದವರ ಮೊಗವನ್ನು ನೋಡಿದರು. .. ಯಾರಿಗೂ ಸ್ಪಷ್ಟತೆ ಇರಲಿಲ್ಲ.. ಹೇಳಿದ ಹಾಗೆ ಮಾಡಿದರು..
ಬಸ್ಸು ಮೆಲ್ಲಗೆ ಹಿಂದಕ್ಕೆ ಚಲಿಸತೊಡಗಿತು.. ಅದರ ಜೊತೆಗೆ ಕೈಗಡಿಯಾರವೂ ಹಿಂದಕ್ಕೆ ಓಡತೊಡಗಿತು.. ಸುಮಾರು ಘಂಟೆಗಳ ಪಯಣ.. ಒಂದು ಅರಣ್ಯದ ಹೆಬ್ಬಾಗಿಲಿನ ಹತ್ತಿರ ಬಸ್ಸು ನಿಂತಿತು..

ಒಂದು ದೊಡ್ಡ ಗುರುಕುಲ.. ದೊಡ್ಡ ಬೇಲಿ ಹಾಕಿದ್ದ ಆಶ್ರಮ.. ಅಲ್ಲಲ್ಲಿ ನೀರು ಹರಿಯುತ್ತಿದ್ದರಿಂದ.. ಬೂಟುಗಳನ್ನು ತೊಳೆದುಕೊಂಡೆ ಬಂದಿದ್ದರು.. ಗಮ್ ಬೂಟುಗಳನ್ನು ಹೊರಗೆ ಬಿಟ್ಟು ಹೆಜ್ಜೆ ಹಾಕಿದರು..  ಅಲ್ಲೊಂದು ಪುಟ್ಟ ಗುಡಿ.. ಆ ದೇವರಿಗೆ ನಮಸ್ಕರಿಸಿ.. ಎಲ್ಲರೂ ಆಶ್ರಮದ ಆವರಣಕ್ಕೆ ಹೊಕ್ಕರು..

ಅಲ್ಲೊಂದು ದೀಪದ ಕಂಬಕ್ಕೆ ಹೂವು ಸುತ್ತಿ.. ಅಲಂಕರಿಸಿದ್ದರು.. ಬಸ್ಸಿನಲ್ಲಿ ಬಂದಿದ್ದ ಮುಖ್ಯ ಅತಿಥಿಗಳು, ಪದಾಧಿಕಾರಿಗಳು ಸೇರಿ ದೀಪ ಬೆಳಗಿದರು.. ಅಲ್ಲಿಂದ ಸ್ವಲ್ಪ ಮುಂದಕ್ಕೆ ಒಂದು ಅರಳಿಕಟ್ಟೆಯ ಕಡೆಗೆ ಹೆಜ್ಜೆ ಹಾಕಿದರು..


ಅಲ್ಲೊಬ್ಬರು ಗಾಯಕಿ.. ಮಧುರಕಂಠದಿಂದ ಪ್ರಾರ್ಥನೆ ಗೀತೆಯನ್ನು ಹಾಡಿದರು.. !


ಹಿರಿಯ ಆದಿ ಕವಿಗಳು.. ಮುಂದುವರೆದ ಪರಂಪರೆಯಲ್ಲಿ ಭಾಷೆಯ ಬೆಳಗಿದ, ಬೆಳೆಸಿದ ಸಾಹಿತಿಗಳು, ಕವಿಗಳು, ಸಾಹಿತ್ಯವನ್ನು ಪೋಷಿಸಿದ್ದ ರಾಜ ಮಹಾರಾಜರು, ನಾಟಕಕಾರರು ಎಲ್ಲರೂ ಇದ್ದರು.. ನಮ್ಮ ಗುರುಗಳಾದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಅಲ್ಲಿದ್ದ ಮಹನೀಯರಿಗೆಲ್ಲ ದೀರ್ಘದಂಡ ನಮಸ್ಕಾರ ಹಾಕಿದರು.. ಆ ಮಹನೀಯರೆಲ್ಲ "ಶ್ರೀ ಮಂಜುನಾಥ ಅವರೇ ನಮ್ಮೆಲ್ಲರ  ಸಾಹಿತ್ಯವನ್ನು ಓದಿ ಅದರ ಬಗ್ಗೆ ನೀವು ಮಾತಾಡುವ ಶೈಲಿ ನಮಗೆಲ್ಲ ಇಷ್ಟವಾಗಿದೆ.. ಹಾಗಾಗಿ ಇಂದು ನಿಮಗೆ ಒಂದು ಗುರುತರವಾದ ಹೊಣೆಗಾರಿಕೆ ಕೊಟ್ಟಿದ್ದೇವೆ.. ಕನ್ನಡ ಭಾಷೆಯ ಆರಂಭ, ಅದು ನೆಡೆದು ಬಂದ ಹಾದಿ, ಭಾಷೆಯ ಉಳಿವು ಈ ರೀತಿಯ ಒಂದು ವಿಷಯವನ್ನು ಕನ್ನಡ ಭಾಷೆಯ ಆದಿಕಾಲದಿಂದ ನೀವಿರುವ ಕಾಲದ ತನಕ ಗಜ ಮಾರ್ಗದಿ ಸಾಗಿ ಬಂದ ವಿವರವನ್ನು ನಿಮ್ಮ ಜೊತೆ ಬಂದವರಿಗೆಲ್ಲ ಹೇಳಬೇಕು ಮತ್ತು ನಮಗೂ ನಿಮ್ಮ ಕಾಲಘಟ್ಟದಲ್ಲಿ ಕನ್ನಡ ಹೇಗಿದೆ ಎನ್ನುವ ಪರಿಚಯವೂ ಆಗಬೇಕು.. ಇದು ನಮಗೆ ನೀವು ಕೊಡುವ ಗುರುದಕ್ಷಿಣೆ ಎಂದರು ಒಕ್ಕೊರಲಿನಿಂದ.. "



ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡು.. ಮತ್ತೊಮ್ಮೆ ಹಿರಿಯರಿಗೆ ನಮಸ್ಕರಿಸಿ.. ನಮ್ಮೆಲ್ಲರ ಗುರುಗಳು, ಮೇಷ್ಟ್ರು ಎಂದು ಪ್ರಖ್ಯಾತರಾಗಿರುವ  ಶ್ರೀ ಮಂಜುನಾಥ ಕೊಳ್ಳೇಗಾಲ ಅವರಿಂದ ಒಂದು ಚಿಂತನ ಮಂಥನ ಕಾರ್ಯಕ್ರಮ ಶುರುವಾಯಿತು.. ಅವರ ಮಾತುಗಳು ಕೇಳಲು ಚಂದ.. ಅವರು ಹೇಳಿದ ಮಾತು "ನಾ ಹುಟ್ಟುವ ಮೊದಲು ಸಾವಿರಾರು ವರ್ಷಗಳ ಹಿಂದೆ ಇದ್ದ ಭಾಷೆ.. ನಾ ಆಳಿದ ಮೇಲೂ ಸಾವಿರಾರು ವರ್ಷಗಳ ಕಾಲ ಇರುವ ಭಾಷೆ ಕನ್ನಡ.. ಇದರ ಬಗ್ಗೆ ಹೇಳಿದಷ್ಟು ಮುಗಿಯದು.. " ವಾಹ್ ಸರಳ ಮಾತುಗಳಲ್ಲಿ ಕನ್ನಡ ಭಾಷೆಯ ಹಿರಿಮೆಯನ್ನು ಸಾರಿದರು. ಜೊತೆಯಲ್ಲಿ ಬಂದವರು ತಮಗೆ ಇದ್ದ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕೇಳಿದಾಗ.. ಅದಕ್ಕೆ ಉತ್ತರಿಸಿದ ರೀತಿ ಸಮಯೋಚಿತವಾಗಿತ್ತು..

ಶ್ರೀಮತಿ ತೇಜಸ್ವಿನಿ ಹೆಗಡೆ ಸಾಹಿತ್ಯ ಲೋಕದಲ್ಲಿ ಒಂದು ದೊಡ್ಡ ಹೆಸರು.. ಕವಯತ್ರಿ, ಬರಹಗಾರರಾದ ಇವರು ಅನೇಕ ಪುಸ್ತಕಗಳನ್ನು ಹೊರತಂದಿದ್ದಾರೆ.. ಇವರ ಪ್ರತಿಭೆಗೆ ಒಂದು ಬಂಗಾರದ ಚೌಕಟ್ಟು ತಂದಿದ್ದು ಈ ಸಮಾರಂಭದಲ್ಲಿ ಅವರನ್ನು ಗೌರವಿಸಿದ್ದು.. ಆಕೆಯ ಕಣ್ಣಲ್ಲಿ ಮಾತನಾಡಲಾಗದಷ್ಟು ಖುಷಿ.. ಮಾತುಗಳೇ ಹೊರಬರುತ್ತಿರಲಿಲ್ಲ.. ಆ ಸುಂದರ ಕ್ಷಣಗಳನ್ನು ಅನುಭವಿಸಿದ ನಾವೆಲ್ಲರೂ ಧನ್ಯ ಎಂದು ಕೊಂಡೆವು..



ಎಲ್ಲರಿಗೂ ವಂದನೆಗಳನ್ನು ತಿಳಿಸಿ ತಮ್ಮ ಮಾತನ್ನು ಮುಗಿಸಿದಾಗ ಎಲ್ಲರೂ ಕರತಾಡನದಿಂದ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.. ನಂತರ ಜರುಗಿದ್ದು ಇನ್ನೊಂದು ಮುಖ್ಯ ಘಟ್ಟ..

ಹವ್ಯಾಸಕ್ಕೆ ಬರೆಯುವವರು, ಖುಷಿಗಾಗಿ ಬರೆಯುವುವರು, ಬರೆಯುತ್ತಲೇ ಇರುವವರ ಕವಿತೆಗಳನ್ನು ಆರಿಸಿ ನೆಡೆಸಿದ ಕವಿಯುಲಿ ಕಾರ್ಯಕ್ರಮ ಇನ್ನಷ್ಟು ಸೊಗಸಾಗಿತ್ತು.. ಶ್ರೀ ಶಶಿಕಿರಣ್ ಮುಲ್ಲೂರು ಅವರ ಒಂದು ಚಿತ್ರಕ್ಕೆ ಕವನ ಬರೆಯಿರಿ ಎನ್ನುವ " ನಮ್ಮ ಚಿತ್ರ ನಿಮ್ಮ ಕವನ" ಸ್ಪರ್ಧೆಗೆ ಬಂದಿದ್ದ ಹಲವಾರು ಕವನಗಳಲ್ಲಿ ಕೆಲವನ್ನು ಆರಿಸಿಕೊಂಡು ಕವಿಗಳ/ಕವಯತ್ರಿಯರ ಧ್ವನಿಯಲ್ಲಿಯೇ ತಾವು ರಚಿಸಿದ ಕವನಗಳನ್ನು ವಾಚಿಸುವ ಕಾರ್ಯಕ್ರಮ.. ಬಂದಿದ್ದ ಕವಿಗಳಿಗೆ/ಕವಯತ್ರಿಯರಿಗೆ ಖುಷಿಯೋ ಖುಷಿ.. ಅಂತಹ ಮಹನೀಯರ ಮುಂದೆ ತಾವು ಬರೆದ ಕವಿತಾವಾಚನ ಬಹುಜನ್ಮದ ಪುಣ್ಯಫಲ ಎನ್ನುವಂತೆ ಒಬ್ಬೊಬ್ಬರೇ ತಮ್ಮ ಕವನಗಳನ್ನು ವಾಚಿಸಿದರು.. ಒಂದಕ್ಕಿಂತ ಒಂದು ಅದ್ಭುತ.. ಎನ್ನುವಂತಿತ್ತು..

ಇಷ್ಟೇ ಅಲ್ಲ ಇನ್ನೂ ಇದೆ ಅಂತ ಎಲ್ಲರೂ ಕೂತೆ ಇದ್ದರು.. ಶ್ರೀ ಗೌತಮ್ ಕುತ್ತೆತ್ತೂರ್ ಅವರು ಬರೆದ "ನೀ ಹಾಡಾದರೆ ನಾ ಶ್ರುತಿಯಾಗುವೆ (ಸಮಗ್ರ) ಪುಸ್ತಕವನ್ನು ಪ್ರತಿಲಿಪಿ - ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಅಕ್ಷಯ್ ಬಾಳೆಗೆರೆ ಅವರಿಂದ ಲೋಕಾರ್ಪಣೆಯಾಯಿತು.. ಆ ಪುಸ್ತಕದ ಬಗ್ಗೆ ಲೇಖಕರು ಮತ್ತು ಪ್ರತಿಲಿಪಿ ವಿಭಾಗದ ಬಗ್ಗೆ ಪ್ರಕಾಶಕರು ವಿವರಿಸಿದರು..



ಕವನ ಸ್ಪರ್ಧೆಯಲ್ಲಿ ಆಯ್ಕೆಯಾದ ಕವನಗಳ ಕತೃಗಳಿಗೆ ಅಭಿನಂದನಾ ಪತ್ರ  ಮತ್ತು ಸ್ಪರ್ಧೆಯಲ್ಲಿ ಗೆದ್ದವರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಿದರು..

ಎಲ್ಲರಿಗೂ ಸಂತೋಷ.. ಸಡಗರ ಎಲ್ಲರ ಮನತುಂಬಿತ್ತು.. ಕಾಡಿನಲ್ಲಿದ್ದ ಪ್ರಾಣಿ ಪಕ್ಷಿಗಳು ಸಂತಸಗೊಂಡವು... ಅವುಗಳ ಕಲರವ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತ್ತು..

ಇಷ್ಟೇನಾ ಅಂದಾಗ.. ರಾಮಾಯಣದ ಲವಕುಶ ಸೇರಿಕೊಂಡು ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ "ಹಯಬಂಧನ" ಎಂಬ ಪ್ರಸಂಗವನ್ನು ಅಚ್ಚುಕಟ್ಟಾಗಿ ಯಕ್ಷಗಾನ ಕಲೆಯಲ್ಲಿ ಮೂಡಿಸಿದವರು ಗಾಣಸೌರಭ ಯಕ್ಷಗಾನ ಕಲಾವೃಂದದ ಮಕ್ಕಳು.. ಯಕ್ಷಗಾನ ಗಂಡುಕಲೆಯೆಂದು ಹೇಳುತ್ತಾರೆ.. ಅದಕ್ಕೆ ಬೇಕಾದ ಶರೀರ, ಶಾರೀರ.. ಆ ಉಡುಗೆತೊಡುಗೆಗಳು ಅಬ್ಬಾ.. ಆ ಮಣಭಾರದ ವೇಷಭೂಷಣದ ಜೊತೆಯಲ್ಲಿ ಅಭಿನಯಿಸೋದು, ಸಂಭಾಷಣೆ ಒಪ್ಪಿಸೋದು.. ಗರ ಗರ ಅಂತ ತಿರುಗುವ, ಸುತ್ತುವ, ಸದಾ ಓಡಾಡುತ್ತಲೇ ಇರುವ ಪಾತ್ರಧಾರಿಗಳ ಹುಮ್ಮಸ್ಸು, ಮತ್ತು ಅವರ ಉತ್ಸಾಹ, ಶಕ್ತಿ ಅಬ್ಬಾ ಅಬ್ಬಾ ಚಪ್ಪಾಳೆ ತಟ್ಟಿ ತಟ್ಟಿ ಎಲ್ಲರ ಕೈಗಳಿಗೆ ನೋವು ಬಂದಿತ್ತೆ ಹೊರತು.. ಆ ಕಲಾವಿದರ ಮೊಗದಲ್ಲಿ ಒಂದು ಬೆವರಿನ ಹನಿ, ಒಂದು ಆಯಾಸದ ತುಣುಕು ಕಾಣಸಿಗಲಿಲ್ಲ.. ಆ ಕಲಾದೇವಿಯ ಮಕ್ಕಳಿಗೆ ಒಂದು ನಮೋನಮಃ.. ಮತ್ತು ಭಾಗವತರಿಗೆ, ಚಂಡೆ, ಮತ್ತು ಪಕ್ಕವಾದ್ಯದ ಪ್ರವೀಣರಿಗೆ ಅಭಿನಂದನೆಗಳು ಎಂದು ಎಲ್ಲರೂ ಹೇಳಿದರು..


ಅಧ್ಯಕ್ಷ ಸ್ಥಾನದಲ್ಲಿ ಇದ್ದ ಸತೀಶ ನಾಯಕರು.. ಪಕ್ಕ ಕವಿಗಳ ಧಿರಿಸಿನಲ್ಲಿದ್ದರು.. ಕಾರ್ಯಕ್ರಮದ ಬಗ್ಗೆ ಮಾತಾಡಿದರು, ಧನ್ಯವಾದಗಳನ್ನು ಅರ್ಪಿಸಿದರು..

ಕಡೆಯಲ್ಲಿ ನೆರೆದಿದ್ದವರೆಲ್ಲ ಗುಂಪಾಗಿ ಹಿರಿಯ ಸಾಹಿತಿಗಳು, ಕವಿಗಳು, ನಾಟಕಕಾರರ ಜೊತೆಯಲ್ಲಿ ಒಂದು ಚಿತ್ರ ಬರೆಸೋಣ ಅಂತ.. ಅಲ್ಲಿದ್ದ ಚಿತ್ರಕಾರರಿಗೆ ಹೇಳಿದರು.. ಆ ಚಿತ್ರಕಾರ ಕುಂಚ, ಬಣ್ಣ, ದೊಡ್ಡ ವಸ್ತ್ರ ತರಲು ಓಡಿದ.. ಅಷ್ಟರೊಳಗೆ ಆ ಸಾಹಿತಿಗಳು.. ಬೇಡಪ್ಪ ಬೇಡ.. ನಾವೆಲ್ಲಾ ಹಾಗೆ ನಿಮ್ಮೊಳಗೆ ಸೇರಿಕೊಂಡು ಬಿಡುತ್ತೇವೆ ಎಂದು ಬಂದಿದ್ದವರಿಗೆ ಯಾರು ಯಾರು ಇಷ್ಟವೋ ಅವರೊಳಗೆ ಆ ಮಹನೀಯರು ಸೇರಿಕೊಂಡು ಬಿಟ್ಟರು..

ಸರಿ.. ಹಾಗೆ ಎಲ್ಲರೂ ವೇದಿಕೆಯ ಮೇಲೆ ಬಂದು.. ಒಂದು ಚಿತ್ರ ತೆಗೆಸಿಕೊಂಡಾಗ ಸಾರ್ಥಕ ಭಾಗ ಎಲ್ಲರ ಮನದಲ್ಲಿ.. ಅಡಿಕೆ ಹಾಳೆಯಲ್ಲಿ ಎಲ್ಲರೂ ಊಟ ಸೇವಿಸಿ ನಿರ್ಗಮಿಸಲು ಹೊರಟಾಗ.. ಗಡಿಯಾರ ನೋಡಿಕೊಂಡರು.. ಅರೆ ನಮ್ಮ ಕಾಲಘಟ್ಟಕ್ಕೆ ಬಂದು ಬಿಟ್ಟಿದ್ದೇವೆ.. ಇದು ಹೇಗೆ ಎಂದು ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾಗ ಅಶರೀರವಾಣಿ ನುಡಿಯಿತು..

"ಕನ್ನಡಾಭಿಮಾನಿಗಳೇ.. ನಿಮ್ಮ ಈ ನಾಡು ನುಡಿಯ ಬಗ್ಗೆ ಇರುವ ಕಾಳಜಿಗೆ ಒಂದು ದೊಡ್ಡ ನಮನಗಳು.. ನಿಮ್ಮ ಈ ಶ್ರಮ, ಪರಿಶ್ರಮ ಸದಾ ಯಶಸ್ಸಿನೆಡೆಗೆ ಸಾಗುತ್ತಲೇ ಇರಲಿ .. ನೋಡಿ ನಿಮ್ಮ ಈ ಗುಂಪಿನ ನಾಯಕಿಗೆ ಸದಾ ಆಶೀರ್ವಾದದ ಬೆಳಕು ಸದಾ ಬೀರುತ್ತಲೇ ಇರುತ್ತೇನೆ..


"ನಿಮಗೆಲ್ಲ ಶುಭವಾಗಲಿ.. ಇದೆ ರೀತಿಯ ಸಮಾರಂಭಗಳು, ಸಡಗರಗಳು ತುಂಬಿ ಹರಿಯುತ್ತಲೇ ಇರಲಿ.. ನೀವು ಬಸ್ಸಿನಲ್ಲಿ ಬಂದದ್ದು.. ಕಾಲಘಟ್ಟದ ಹಿಂದಕ್ಕೆ.. ಅಂದರೆ ಭಾಷೆಯ ಆರಂಭದ ದಿನಗಳಿಗೆ.. ಭಾಷೆ ಬೆಳೆಯುತ್ತಾ ಹೋದ ಹಾಗೆ ನೀವು ಕೂಡ ಮುಂದೆ ಮುಂದೆ ಬರುತ್ತಲೇ ಇದ್ರಿ. .. ಹೊಸಕನ್ನಡ ಕವಿತೆಗಳು, ಮಾತುಗಳು, ಯಕ್ಷಗಾನ ಇವುಗಳೆಲ್ಲ ಬಂದ್ದದ್ದರಿಂದ ಹಾಗೇ ನಿಮ್ಮ ಕಾಲಘಟ್ಟಕ್ಕೆ ಬಂದು ಬಿಟ್ಟಿದ್ದೀರಿ.. ನಿಮ್ಮ ವಾಚುಗಳು ನೋಡಿ ಸರಿಯಾದ ಸಮಯ ತೋರಿಸುತ್ತಿದೆ.. ಯಾಕೆ ಗೊತ್ತಾ "ಈ ಸಮಯ ಆನಂದಮಯ" ಅಂತ ಕರುನಾಡ ಅಭಿಮಾನಿಗಳ ದೇವರುಗಳ ದೇವರು ಹೇಳಿರುವ ಹಾಡಿನಂತೆ ಸುಂದರ ಸಮಯವಿದು.. ಈ ಕ್ಷಣಗಳನ್ನು ನಿಮ್ಮ ಕಣ್ಣ ಮುಂದೆ ತರಲು ಆ ಛಾಯಾಗ್ರಾಹಕರು ಪ್ರಯತ್ನ ಪಟ್ಟಿದ್ದಾರೆ ನೋಡಿ.. ಆನಂದಪಡಿ ಶುಭವಾಗಲಿ.. "

3K - ರಾಜ್ಯೋತ್ಸವ ಸಂಭ್ರಮ : 16.12.2018 - ಎಲ್ಲರಿಗೂ ಆತ್ಮೀಯ ಸ್ವಾಗತ :)

೩ಕೆ ತಂಡಕ್ಕೆ ಒಂದು ಅಭಿನಂದನೆ ಸಲ್ಲಿಸುತ್ತಾ, ತೆರೆಮರೆಯಲ್ಲಿ ಪರಿಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಮತ್ತು ಧನ್ಯವಾದಗಳನ್ನು ಸಲ್ಲಿಸುವ ಒಂದು ಪುಟ್ಟ ಪ್ರಯತ್ನ ಈ ಲೇಖನ.. ೩ಕೆ ಚಿರಾಯುವಾಗಲಿ.. ಶುಭವಾಗಲಿ ..



ಕನ್ನಡವೇ ಗೆಲ್ಲೋದು.. ಕನ್ನಡವೇ ಉಳಿಯೋದು.. !!!

Wednesday, September 26, 2018

A Challenge in a different Style!!!

When you pack your bags and on a mission, you don't know where will get a curve, challenges, or rain or sunshine...you keep moving all the time...!

It happened like this, in the last week, I happened to attend a training session, and the take way was amazing.. i explicitly marked the experience in my blog.. you can find the link here!!!

The other interesting task was, cooking a story with randomly selected dies which has letter/picture on it. 

The trainer Mr. Kiran, selected bunch of students, and he wanted one more.. 10 seconds passed, since no one came forward, I was sitting in the front row, stood up and joined the bandwagon!!!

The team got the words/pictures as can be noticed in the picture attached :-)
The words of magic!

With little time or rather no time, we bunch of five made out some story...but somewhere in my heart, said..."sri you go for it..and do something for the nine words...they are crying for optimum utilisation!"

Normally a submissive character am.. walked up to my team mate, and asked to take a pic of the sheet where the information was available, and promised my team mates that, i would give different treatment for these jumble of words....!

So the results are you can find below!

An Advertisement for happiness :-)

A "VISITING CARD" said, we sell "TENT" of happiness, it removes your "SAD"ness, it creates "L"(Love) messages all around. It can make any heart "CLOCK" tick all the times, the world is a CARTOON channel, you walk with "WALKING 
STICK" of confidence, and get the confidence by looking at  "FISH" swims in the water.  You will have honey of happiness for your life from each moment like HONEY BEE sucks fragrance from every flower and makes bee hive!


                                              *****

Cracking Case!!!


A police officer arrives at the crime scene. A blood shed TENT looking scary.  He lights a cigarette, walks around, a VISITING CARD, with blood stains stuck greets him.   


The face of the body looked very SAD, it looked like before being butchered,  there was a struggle like a FISH out of water.

He gets near to the body with a hand kerchief covering his nose, a slit in the neck..but the gold chain is untouched, he looks around and suddenly "tim tim tim tim" a CLOCK starts screaming for its attention, cop cuts the noise, and finds the murder mystery interesting.  The neck had a gold chain dangling outside, fingers were lased with rings with a bright stones, one hand a had a gold bracelet with a HONEY BEE image embossed on it.  

The cop noticed a WALKING STICK, with a Letter L in a square, etched in gold,  on top of the handle, lying near the body. A cluster of blood stains indicated that he tried to hold on to it in the struggle for his life. Puzzled, he looks around, he finds a famous CARTOON character in pieces lying around. The cop bends down, and picks up the pieces covering his hands in a kerchief, and flips one of the piece.  His eyes illuminates with 1000 watts, he checks the visiting card again, it had a address of the shop, which sells antique puzzles. 

He collects all the pieces and start cracking the puzzle one by one as per the clue on the other side.  He finds it interesting.  In a minute he could able to crack the puzzle, but only one small slit remained open.  He looks around, looks at the stick, picks it up and puts the L mark near the uncompleted puzzle, and he screams hurray...!

Carefully tilts the head of the stick, to his surprise, it behaved exactly the way he thought, and slowly he bends the walking stick...his eyes started glittering...so the diamonds rolling out from the walking stick!!!

***


Saturday, September 8, 2018

ದೇವರು ನಕ್ಕೆ ನಗುತ್ತಾನೆ - ೪

 ದೇವರ ರುಜು ಅನ್ನುವ ಮಾತು ಕುವೆಂಪು ಅವರ ಪದ್ಯದಲ್ಲಿ ಮೂಡಿ ಬಂದಿತ್ತು.. ಹಾರುವ ಹಕ್ಕಿಗಳ ಸಾಲು.. ತೂಗಾಡುವ ಮರಗಿಡಗಳು.. ತೇಲಾಡುವ ಮೋಡಗಳು. ಹೀಗೆ ನೂರಾರು ರೂಪದಲ್ಲಿ ಕಾಣಬಹುದು.. !!!

ನಾನು ನನ್ನ ಮಗಳು ಕಾರಿನಲ್ಲಿ ದೂರದೂರಿಗೆ ಪಯಣ ಮಾಡಬೇಕಿತ್ತು . ಮೊದಲೇ ಪ್ಲಾನ್ ಮಾಡಿದ್ದರೂ.. ಕೆಲಸದ ಒತ್ತಡ.. ಮೊಬೈಲನ್ನು ಚಾರ್ಜ್ ಮಾಡಿರಲಿಲ್ಲ.. ಬಟ್ಟೆ ಬರೆಯೆಲ್ಲಾ ಪ್ಯಾಕ್ ಮಾಡಿಕೊಂಡು ಸಿದ್ಧವಾದೆವು.. ಮನೆಗೆ ಬೀಗ ಹಾಕುವ ಮೊದಲು ಒಮ್ಮೆ ಸುಮ್ಮನೆ ನನ್ನ ಲಗೇಜ್, ಕ್ಯಾಮೆರಾ ಬ್ಯಾಗ್, ಬ್ಯಾಟರಿ.. ಕನ್ನಡಕ ಹೀಗೆ ಎಲ್ಲವನ್ನು ಪರೀಕ್ಷಿಸುವ ಅಭ್ಯಾಸ.. ಕಾರಿನಲ್ಲಿ ಪೆಟ್ರೋಲ್ ಇತ್ತು.. ಹಾಗಾಗಿ ಅದನ್ನು ಪರೀಕ್ಷಿಸುವ ಅಗತ್ಯ ಬಿದ್ದಿರಲಿಲ್ಲ.. 

ಇನ್ನೇನು ಹೊರಡಬೇಕು.. ಅಚಾನಕ್ ಮೊಬೈಲ್ ಚಾರ್ಜ್ ನೆನಪಿಗೆ ಬಂತು.. ಸರಿ ಮೊಬೈಲ್ ಚಾರ್ಜರ್ USB ಕೇಬಲ್ ಮಾತ್ರ ಕಾರಿನೊಳಗೆ ಇತ್ತು adapterನ ತೆಗೆದು ಡಿಕ್ಕಿಯ ಬ್ಯಾಗಿನಲ್ಲಿಟ್ಟೆ... ನನ್ನ ಮೊಬೈಲ್ ಚಾರ್ಜ್ ಕಮ್ಮಿ ಇದ್ದರಿಂದ.. ಹೊರಟ ತಕ್ಷಣ ಚಾರ್ಜ್ ಹಾಕುವಂತೆ ಮಗಳಿಗೆ ಹೇಳಿದೆ.. 

ಒಂದು ಮೂವತ್ತು ಕಿಮಿ ಪಯಣ ಮಾಡಿದ ಮೇಲೆ.. ಅವಳು ನನ್ನ ಮೊಬೈಲ್ ಕಿತ್ತು.. ತನ್ನ ಮೊಬೈಲ್ ಸಿಕ್ಕಿಸಿದಳು.. ನಾನು.. ಒಯೆ ಚಾರ್ಜ್ ಕಮ್ಮಿ ಇದೆ.. ನಂದು ಪೂರ್ತಿ ಆಗಲಿ ಆಮೇಲೆ ನೀನು ಚಾರ್ಜ್ ಮಾಡಿಕೊ ಎಂದೇ.. ತುಸು ಗಂಭೀರ ಧ್ವನಿಯಲ್ಲಿ.. 

ಮಗಳು ನಗುತ್ತ.. "ಅಪ್ಪ ಏನೂ ನಿಮ್ಮ ತಲೆ.. ಕಾರಿನಲ್ಲಿ ಹೇಗಿದ್ದರೂ ಮೂರು ಚಾರ್ಜಿಂಗ್ ಪಾಯಿಂಟ್ ಇದೆ.. ಕೇಬಲ್ ತಂದಿದ್ದಾರೆ ಸಾಕಿತ್ತು.. ಇಬ್ಬರ ಮೊಬೈಲ್ ಚಾರ್ಜ್ ಆಗ್ತಾ ಇತ್ತು.. 

ಹೆದ್ದಾರಿಯಲ್ಲಿ ರಸ್ತೆಯ ನೋಡುತ್ತಾ ಹಾಗೆ ತಲೆ ಎತ್ತಿ ಆಗಸವ ನೋಡಿದೆ ... ಮೋಡಗಳು ಕಪ್ಪಾಗುತ್ತಿದ್ದವು.. ಬೆಳ್ಳನೆ ರವಿಯ ಕಿರಣಗಳು ಕಾರ್ಮೋಡಗಳಿಂದ ಹೊರಗೆ ಇಣುಕುತಿತ್ತು.. ಜೊತೆಯಲ್ಲಿ ದೇವರ ಹುಸಿನಗೆಯ ಜೊತೆ.. ಕಿರೀಟಧಾರಿ ದೇವರು ಹಣೆಯನ್ನು ಒಮ್ಮೆ ಬಡಿದುಕೊಂಡು "ಏನೋ ಶ್ರೀ ನಿನ್ನ ಕತೆ.. " ಎಂದಾಗ ನನ್ನ ಪೆನ್ ಡ್ರೈವಿನಲ್ಲಿ "ದೊಡ್ಡವರೆಲ್ಲ ಜಾಣರಲ್ಲ.. ಚಿಕ್ಕವರೆಲ್ಲ ಕೋಣರಲ್ಲ" ಹಾಡು ಬರುತಿತ್ತು.. ನಾನು ನಕ್ಕೆ ದೇವರು ನಕ್ಕ.. !



*****

ವಿಷ್ಣುವರ್ಧನ್ ಅವರ ಸುಪ್ರಭಾತ ಚಿತ್ರದ ಹುಚ್ಚಭಿಮಾನಿ ನಾನು.. ಚಿತ್ರದ ಮೊದಲಾರ್ಧ ಅಮೋಘವಾಗಿದೆ.. ಖಿನ್ನತೆಯಿಂದ ಬಳಲುವ ಮಂದಿಗೆ ಉತ್ತಮ ಟಾನಿಕ್ ಇದೆ ಆ ಚಿತ್ರದಲ್ಲಿ.. ಅದಿರಲಿ.. ವಿಷ್ಣು ತೊದಲುವಿಕೆಯಿಂದ ಬಳಲುವಾಗ ಅವನಕ್ಕ ಶ್ರೀವಿದ್ಯಾ ಹೇಳಿಕೊಡುವ ಔಷಧಿ.. ನಗರದಿಂದ ದೂರ ಹೋಗಿ ಒಬ್ಬನೇ ಮಾತಾಡುತ್ತಾ ಇರು.. ಸಲೀಸಾಗಿ ನಿನ್ನ ತೊದಲುವಿಕೆ ಮಾಯವಾಗುತ್ತದೆ.. ಅದು ವಿಷ್ಣುವಿಗೆ ಫಲಕಾರಿಯಾಗುತ್ತದೆ.. ಚಿತ್ರದಲ್ಲಿ ಮಾನು ನೀವೇಕೆ ಈ ಬೆಟ್ಟದಲ್ಲಿ ಬಂದು ನೆಲೆಯಾಗಿದ್ದೀರಾ ಎಂದಾಗ.. ವಿಷ್ಣು ತಮ್ಮ ಸಮಸ್ಯೆ ಹೇಳಿ.. ಈಗ ಬೆಟ್ಟ ಗುಡ್ಡಗಳು, ಪೆಟ್ರೋಲ್ ಬಂಕ್, ಬೈಕ್ ಎಲ್ಲದರ ಜೊತೆ ಮಾತಾಡುತ್ತೇನೆ ಎನ್ನುತ್ತಾರೆ.. ನನ್ನದು ಅದೇ ರೀತಿಯ ಸ್ವಭಾವ.. ನನ್ನ ಮೊಬೈಲು, ಕಾರು, ಬೈಕು.. ಯಾವುದೇ ಇರಲಿ ಅದರ ಜೊತೆಯಲ್ಲಿ ಒಂದು ಬಾಂಧವ್ಯ ಬೆಳೆಸಿಕೊಂಡಿರುತ್ತೇನೆ..

ಒಮ್ಮೆ ಒಂದು ಮುಖ್ಯ ಕೆಲಸಕ್ಕಾಗಿ ಹೊರಟಿದ್ದೆ.. ಅರ್ಧ ದಾರಿಯಲ್ಲಿ ತಿಂಡಿಗೆ ನಿಲ್ಲಿಸಿದಾಗ.. ಒಂದು ವಿಚಿತ್ರ ಯೋಚನೆ ಬಂತು ..ತಿಂಡಿ ತಿಂದು.. ಕಾರಿನಲ್ಲಿ ಹೊರಟಾಗ.. ಯಾವ ಹಾಡು ಬರುತ್ತದೆಯೋ ಅದು ನನ್ನ ಕೆಲಸದ ಪರಿಣಾಮ ಹೇಳುತ್ತದೆ ಎನ್ನಿಸಿತು.. ಸರಿ ಆರಾಮಾಗಿ ತಿಂಡಿ ತಿಂದು.. ಕಾರು ಸ್ಟಾರ್ಟ್ ಮಾಡಿದೆ.. ದಿಲ್ ಚಾಹ್ತಾ ಹೈ ಚಿತ್ರದಡಿ "ತನ್ಹಾಹಾಯಿ..." ಹಾಡು ಬಂತು..


ಒಮ್ಮೆ ನಕ್ಕು ಸುಮ್ಮನಾದೆ.. ಅದನ್ನು ಮರೆತು ಹೋದೆ ಕೂಡ.. ಸ್ಥಳ ತಲುಪಿ ನನ್ನ ಕೆಲಸದ ಕಡೆ ಗಮನ ಕೊಟ್ಟೆ.. ವಾಪಸ್ ಬರುವಾಗ ದಿನದಲ್ಲಿ ನೆಡೆದ ಘಟನೆ ಮೆಲುಕು ಹಾಕಿದಾಗ.. ನನ್ನ ಕಾರು ಬೆಳಿಗ್ಗೆಯೇ ನನ್ನ ಕೆಲಸದ  ಫಲಿತಾಂಶವನ್ನು ಕೊಟ್ಟಿತ್ತು.. ಕಾರಿನ ಡ್ಯಾಶ್ ಬೋರ್ಡಿನಲ್ಲಿದ್ದ ಗಣಪ ವಿಗ್ರಹ ನೋಡಿದೆ.. ಸೊಂಡಿಲೆತ್ತಿ ನಕ್ಕ ಗಣಪ.. ಇರಲಿ ಬಿಡು ಶ್ರೀ.. ಇದೊಂದು ಅನುಭವ ಅಷ್ಟೇ.. ಎಂದನು.. ಆಗಸ ನೋಡಿದೆ ದೇವರು ನಸು ನಗುತ್ತಿದ್ದ..


ಮತ್ತಷ್ಟು ದೇವರ  ಜೊತೆಯಲ್ಲಿ ನಗುತ್ತಾ ಅದರ  ಕಥೆ ಹೇಳಲು ಬರುವೆ ಮತ್ತೊಮ್ಮೆ :-)

Sunday, March 25, 2018

ಮೈತ್ರಿ ಪ್ರಕಾಶನದ ನಾಲ್ಕು ರತ್ನಗಳು ಹೊಳಪು ಕಂಡ ಕ್ಷಣ

"ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನೂ ಬಲೆಯ ಮಲಾರವೇ" ನಾಲ್ಕನೇ ತರಗತಿಯಲ್ಲಿ ರನ್ನನ ಊರುಭಂಗ ಪಾಠದಲ್ಲಿ ಅಜಿತಸೇನಾಚಾರ್ಯರು ವಿದ್ಯಾಕಾಂಕ್ಷಿ ರನ್ನನಿಗೆ ಹೇಳುವ ಮಾತಿದು..

ಇಂದಿನ ಸಮಾರಂಭ ಕಂಡಾಗ ಇದರ ಇನ್ನೊಂದು ಮಗ್ಗುಲು ನೋಡುವ ಹಾಗೆ ಆಯಿತು.. ಶ್ರೀಯುತ ಜೋಗಿಯವರು ಪುಸ್ತಕ ಬಿಡುಗಡೆ ಮಾಡಿ ಅದನ್ನು ಜಗತ್ತಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳುತ್ತಾ ಕೆಲವು ಪ್ರಕಾಶಕರು ಅನುಸರಿಸುತ್ತಿದ್ದ ಮಾರ್ಗವನ್ನು ಹೇಳುತ್ತಾ ಹೋದಾಗ ನನಗೆ ಈ ಮೇಲಿನ ಮಾತು ನೆನಪಿಗೆ ಬಂತು. .

ಪುಸ್ತಕ ಬಿಡುಗಡೆ ಎಂದಾಗ  ಒಂದಷ್ಟು ಮಂದಿ ಬಂದು ಶುಭ ಹಾರೈಸಿ ಹೋಗುತ್ತಾರೆ ಎನ್ನುವ ವಾಡಿಕೆಯ ಮಾತಿಗೆ ವಾಡಿಯಾ ಸಭಾಂಗಣ ವಿರುದ್ಧವಾಗಿ ನಿಂತಿತ್ತು..

ಪ್ರಾರ್ಥನಾ ಗೀತೆಗಳನ್ನು ಹಾಡಿದ ಇಬ್ಬರೂ ಗಾಯಕರಿಂದ ಶುರುವಾದ ಕಾರ್ಯಕ್ರಮ.. ದೀಪ ಬೆಳಗಿ ನಂತರ ಸ್ವಾಗತ ಭಾಷಣ.. ನಂತರ ಬಂದ ಅತಿಥಿಗಳನ್ನು ಪರಿಚಯ ಮಾಡಿಸಿದ್ದು.. ಪುಸ್ತಕ  ಬಿಡುಗಡೆ ಎಲ್ಲವೂ ಸುಂದರವಾಗಿತ್ತು..

ಇಡೀ ಸಭಾಂಗಣ ತುಂಬಿ ತುಳುಕುತ್ತಿತ್ತು.. ಎಲ್ಲರ ಮೊಗದಲ್ಲಿಯೂ ಹಬ್ಬದ ಸಡಗರ ತುಂಬಿತ್ತು.. ಮೈತ್ರಿ ಪ್ರಕಾಶನ ತನ್ನ ಮಡಿಲಿನಿಂದ ನಾಲ್ಕು ಪುಸ್ತಕಗಳನ್ನು ಓದುಗರಿಗೆ ಒದಗಿಸಿದ್ದು.. ಮತ್ತೆ ಅದರ ವಿಶೇಷತೆ ನಾಲ್ಕು ಪುಸ್ತಕಗಳು ವಿಭಿನ್ನ ಮುಖ ಹೊತ್ತು ಮೂಡಿ ಬಂದವು..

ಭಿನ್ನ ಭಿನ್ನ ವಿಷಯ.. ಅದನ್ನು ಪ್ರಸ್ತುತ ಪಡಿಸಿದ ರೀತಿ ಎಲ್ಲವೂ ವಿಭಿನ್ನ ಹಾದಿಯನ್ನುತೋರಿಸುತ್ತಿತ್ತು.. ಈ ಎಲ್ಲಾ ಪುಸ್ತಕಗಳನ್ನು ಓದಿ ಮುಂದೆ ನನ್ನ ಮಸ್ತಕಕ್ಕೆ ಅರಿವಾದ ವಿಷಯಗಳನ್ನು ಹಂಚಿಕೊಳ್ಳುವ ತವಕ ಇದೆ.. ನೋಡೋಣ ಕಾಲಾಯ ತಸ್ಮೈ ನಮಃ..

ಶ್ರೀಯುತ ಜೋಗಿಯವರ ನೇರ ಮಾತುಗಳು ಸೊಗಸಾಗಿದ್ದವು.. ಶ್ರೀಮತಿ ಶೈಲಜಾ ನಾಗರಾಜ ಅವರ ಮಾತುಗಳು.. ಮುಂದೆ ತುರ್ತು ಕೆಲಸ ಇದ್ದ ಕಾರಣ ಶ್ರೀಯುತ ಸೇತುರಾಂ ಅವರ ಮಾತುಗಳನ್ನು ಕೇಳಲಾಗಲಿಲ್ಲ.. ಅದರ ವಿಡಿಯೋ ತುಣುಕು ಸಿಗಬಹುದೇನೋ ನೋಡೋಣ..

ಅನೇಕ ದಿನಗಳಾದ ಮೇಲೆ ಸಿಕ್ಕ ಸ್ನೇಹಿತರು.. ಮಾತುಗಳು.. ನಗು.. ಜೊತೆಯಲ್ಲಿ ಗೆಳೆಯರ ಮಿಲನ.. ಖುಷಿ ಕೊಟ್ಟಿತು..

ಇನ್ನೊಂದು ವಿಶೇಷ ಕಾದಿತ್ತು.. ಬಿಪಿ ವಾಡಿಯ ಸಭಾಂಗಣವನ್ನು ಸುಮಾರು ಮೂವತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ.. ನನ್ನ ಬಾಲ್ಯದಲ್ಲಿ ವಾಡಿಯಾ ಪಕ್ಕದಲ್ಲಿದ್ದ ಲೈಬ್ರರಿಯಲ್ಲಿ ಕಾಮಿಕ್ ಪುಸ್ತಕಗಳನ್ನು ಓದಲು ಹೋಗುತ್ತಿದ್ದೆ.. ಈ ನಾಲ್ಕೈದು ವರ್ಷಗಳಲ್ಲಿ ಬ್ಲಾಗ್ ಗೆಳೆಯರ ಅನೇಕ ಪುಸ್ತಕಗಳ ಬಿಡುಗಡೆ ಮತ್ತು ಪದಕಮ್ಮಟ ಕಾರ್ಯಕ್ರಮ.. ಒಂದೆರಡು ಸಂಗೀತ ಸಂಜೆ ಕಾರ್ಯಕ್ರಮಗಳನ್ನು ನೋಡಿದ್ದೇ.. ಆದರೆ ಈ ಸಭಾಂಗಣವನ್ನು ನವೀಕರಿಸಿ.. ಹೊಸ ಹೊಸ ದೀಪಗಳನ್ನು ಹಾಕಿ ಚೊಕ್ಕವಾಗಿ ಮಾಡಿದ್ದಾರೆ.. ಸೊಗಸಾಗಿದೆ..

ಸುಂದರ ಕಾರ್ಯಕ್ರಮವನ್ನು ನೋಡಿ ಬಂದ ಖುಷಿಯಾಗಿದ್ದ ಮನಸ್ಸು.. ಹೇಳಿದ್ದು ಸರಸ್ವತಿ ನೆಲೆಸಿರುವ ತಾಣವೇ ಇದು.. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಮೈತ್ರಿ ಪ್ರಕಾಶನದ ಶ್ರೀ ಉಮೇಶ್ ದೇಸಾಯಿ ದಂಪತಿಗಳು.. ಅಪ್ಪ ಎನ್ನುವ ಅದ್ಭುತ ಶಕ್ತಿಯನ್ನು ಕುರಿತು ತಮ್ಮ ಅನುಭವಗಳನ್ನು ಲೇಖನವನ್ನಾಗಿಸಿ ಸಂಪಾದಕತ್ವ ವಹಿಸಿದ್ದ ಶ್ರೀ ಗುರುಪ್ರಸಾದ್ ಕುರ್ತುಕೋಟಿ ಅವರಿಗೆ ಧನ್ಯವಾದಗಳು.. ಮತ್ತು ಮೊದಲ ಪ್ರಯತ್ನದಲ್ಲಿಯೇ ಶಭಾಷ್ ಗಿರಿ ಗಿಟ್ಟಿಸಿದ ಶ್ರೀ ಲಕ್ಷ್ಮಣ್ ಅವರಿಗೆ ಅಭಿನಂದನೆಗಳು ..

ಪುಟ ಪುಟವೂ ಹೊಸ ಜಗತ್ತನ್ನು ಪರಿಚಯಿಸುವ ಈ ರೀತಿಯ ಪುಸ್ತಕದ ಸಮಾರಂಭವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ ಪ್ರಕಾಶಕರಿಗೂ ಸಂಪಾದಕರಿಗೂ ಸಭೆಯಲ್ಲಿ ಸೇರಿದ್ದ ಎಲ್ಲಾ ಶ್ರೀ ಉಮೇಶ್ ದೇಸಾಯಿಯವರ ಮಾತಿನಲ್ಲಿ ಹೇಳುವುದಾದರೆ ಓದುಗ ದೊರೆಗಳಿಗೆ ಧನ್ಯವಾದಗಳು ಶುಭ ಹಾರೈಕೆಗಳು..

ನನ್ನ  ಕಣ್ಣಿಗೆ ಕಂಡ ಕೆಲವು ಚಿತ್ರಗಳು ನಿಮಗಾಗಿ.. !!!










Wednesday, March 21, 2018

ಜ್ಞಾನದ ಆಣೆಕಟ್ಟಿಗೆ ಒಂದು ಕಾಗಜ :-)

"ಸರ್ ಸರ್..!"

"ಏನಪ್ಪಾ?"

"ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು  ಬೀದಿಯಲ್ಲಿ ಮಾರುತ್ತಿದ್ದರೆಂದು ಕೇಳಿದ್ದೆ.."  

"ಹೌದು ನೀ ಕೇಳಿದ್ದು ನಿಜಾ ಆರೇಳು ಶತಮಾನಗಳ ಹಿಂದೆ.. ಇವಾಗ ಏನು ಸಮಾಚಾರ?" 

"ಸರ್..  ಅದೇ ತರಹ ಸುಂದರ ಮಾತುಗಳು ,ಒಳ್ಳೆಯ ಅರ್ಥವಿಸ್ತಾರ..ಮುಂತಾದ ಮನಸ್ಸಿಗೆ ನೆಮ್ಮದಿ ಕೊಡುವ ಮಾತುಗಳನ್ನು ಮಾರುವ / ಹಂಚಿಕೊಳ್ಳುವ  ತಾಣವಿದೆಯೇ..  ಇವುಗಳು ಹೇರಳವಾಗಿ ಸಿಗುವ ಜಾಗವಿದೆಯೇ.."

"ನೀ ಭೂಲೋಕಕ್ಕೆ ಬಂದಿರುವುದು ಸರಿಯಾಗಿದೆ.. ಮತ್ತು  ಸರಿಯಾದ ವ್ಯಕ್ತಿಯ ವಿಳಾಸವನ್ನೇ ಕೇಳುತ್ತಿರುವೆ.. ನೋಡು  ಈ ಮನುಜರು ಕಾಡುವ ಸಮಯದಲ್ಲಿ ಸಮಯವನ್ನು ಕಾಡುವುದಕ್ಕೆ ಫೇಸ್ಬುಕ್. .. ವಾಟ್ಸಾಪ್ ಮಾಧ್ಯಮವನ್ನು ಬಳಸುತ್ತಿದ್ದಾರೆ.. ಅದರಲ್ಲಿ   ಶ್ರೀಯುತ ... .. .. .. ... ... ... ... ... ಇವರನ್ನು  ಹುಡುಕು.. ನೀ ಹುಡುಕಿದ್ದಕ್ಕಿಂತ ಹೆಚ್ಚಿಗೆ ಸಿಗುತ್ತದೆ ..ಇದು ಖಂಡಿತವಾದ ಮಾತು!!!"

ಟಕ್ ಅಂತ ಮೊಬೈಲ್ ತೆಗೆದು ಹುಡುಕಿಯೇ ಬಿಟ್ಟಾ.. ಸಿಕ್ಕೇ  ಬಿಟ್ಟಿತು ಹುಡುಕುತ್ತಿದ್ದ ತಾಣ.. 
 
ಹುಡುಕಿದ ತಾಣವಾವುದು ಗೊತ್ತೇ? 

ಕಗ್ಗಗಳನ್ನು ರಸವಾಗಿ ಎಲ್ಲರಿಗೂ ತಲುಪುವುವಂತೆ ಹಂಚಿದ... ಸ್ತೋತ್ರಗಳನ್ನು ಲಘುವಾಗಿ ಅರ್ಥೈಸುವಂತೆ ಹಂಚುತ್ತಿರುವ ಶ್ರೀಯುತ  ತಿರುಮಲೈ ಅವರು 

ಇವರ ಸಾಹಿತ್ಯ ಕೃಷಿಯನ್ನು ಕಂಡು  ಕಗ್ಗಗಳ ಪಿತಾಮಹರೇ ಇವರಿಗೆ ಕನಸಲ್ಲಿ ಬಂದು ಆಶೀರ್ವದಿಸುತ್ತಾರೆ..  ಕಗ್ಗಗಳು ಆಯ್ತು ಮುಂದಕ್ಕೆ ಎಂದುಕೊಂಡಾಗ ಇನ್ನೊಂದು ಹಾದಿಗೆ ಹೊರಳಿ ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಅರ್ಥೈಸಿಕೊಂಡು ತಮ್ಮ ಬಳಗಕ್ಕೆ ಹಂಚಿಕೊಳ್ಳುತ್ತಿದ್ದಾರೆ.. 

ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳು ವಜ್ರ ವೈಡೂರ್ಯಗಳು ರಸ್ತೆಯಲ್ಲಿ ಬಿಕರಿಯಾಗುತ್ತಿದ್ದವು .. ಆ ಆಭರಣಗಳ ರಾಶಿಯನ್ನು ಬೀಗ ಹಾಕಿ ಜೋಪಾನ ಮಾಡುತ್ತಾ ಹೆಚ್ಚಿನ ಬೆಲೆಗೆ ಮಾರುತ್ತಿರುವ ಈ ಕಾಲದಲ್ಲಿ,  ಕಳುವಾಗದ.. ಖಾಲಿಯಾಗದ.. ಮುಚ್ಚಿಟ್ಟುಕೊಳ್ಳಲಾಗದ ಜ್ಞಾನ ಸಂಪತ್ತನ್ನು ಹೆಕ್ಕಿ ಹೆಕ್ಕಿ ತಮ್ಮ ಬಳಗಕ್ಕೆ ತಲುಪಿಸುತ್ತಿರುವುದು ಒಂದು ಮಹಾನ್ ಸಾಧನೆಯೇ ಹೌದು.. 

ಹತ್ತೇ ಹತ್ತು ನಿಮಿಷ ಇವರ ಬಳಿ ಮಾತಾಡಿದರೂ ಸಾಕು .. ಜ್ಞಾನ ಭಂಡಾರವನ್ನೇ ಹೊತ್ತು ಸಾಗುತ್ತೇವೆ..ಸಂಗೀತ , ಆಧ್ಯಾತ್ಮ, ಜ್ಞಾನ, ಸಂಸ್ಕಾರ, ಊಟೋಪಚಾರ, ಮೃದು ಮಾತು ಇವೆಲ್ಲ ಇವರ ಸ್ವತ್ತು.. 

ಇಂದು ಶ್ರೀಯುತ ರವಿ ತಿರುಮಲೈ ಅವರ ಜನುಮದಿನ .. ಬರೆಯೋದಕ್ಕೆ ಏನಿದೆ ಅಂತ ಯೋಚನೆ ಬಂತು.. ಕಾರಣ ಕಳೆದ ನಾಲ್ಕು ವರ್ಷಗಳಿಂದ ಕಗ್ಗ ರಸಧಾರೆ ಪುಸ್ತಕ ಹೊರಬರುತ್ತಿತ್ತು.. ಅದರ ಮರೆಯಲ್ಲಿ ಮನಕ್ಕೆ ತೋಚಿದ ಬಾಲ ಭಾಷೆಯಲ್ಲಿ ಒಂದಷ್ಟು ಪದಗಳನ್ನು ಕೂಡಿಸಿಡುತ್ತಿದ್ದೆ.. ಈ ಬಾರಿ ಡಿವಿಜಿ ಅಜ್ಜ ಕೂಡ ಶ್ರೀಕಾಂತ ಅದೇನೂ ಕಿಸೀತೀಯ ನೋಡೋಣ ಅಂತ ರೇಗಿಸುತ್ತಾ ನನ್ನ ಹುಮ್ಮಸ್ಸನ್ನು ಹೆಚ್ಚು ಮಾಡಿದಂತೆ ಕನಸು ಬಿತ್ತು. 

ಅದೇನು ಬರೀತೀ  ನೋಡೇ ಬಿಡ್ತೀನಿ ..

ಇತ್ತ ಅಜ್ಜ  ಅತ್ತ ಗುರುಗಳಾದ   ಶ್ರೀ ರವಿ ಅವರು.. ಇತ್ತ ಧರಿ ಅತ್ತ ಪುಲಿ ತರಹ ಆಗದೆ ಇತ್ತ ಜ್ಞಾನದ ಕಡಲು ಅತ್ತ ಜ್ಞಾನದ ಆಣೆಕಟ್ಟು.. ಇಬ್ಬರೂ ಪ್ರೋತ್ಸಾಹಿಸಿದ  ಫಲ.. ಒಂದಷ್ಟು  ಪದಗಳನ್ನು ಕಲೆ ಹಾಕಿ ಶುಭಾಶಯ ಕೋರಿಯೇ ಬಿಡೋಣ ಅನ್ನುವ ದುಸ್ಸಾಹಸಕ್ಕೆ  ಕೈ ಹಾಕಿರುವೆ.. !

ಗುರುಗಳೇ ಜನುಮದಿನದ ಶುಭಾಶಯಗಳು :-) :-) :-)

ಸದಾ :-) :-) ಇರಿ!!!

Sunday, March 4, 2018

ಆಲದ ಮರದಲ್ಲಿ ಆಂತರ್ಯದ ಗಾನ

ಒಂದು ಹಳ್ಳಿ.. ಆ ಹಳ್ಳಿಯಲ್ಲಿ ಒಂದು ಆಶ್ರಮ.. ಅಲ್ಲಿ ಒಂದು ದೊಡ್ಡ ಆಲದ ಮರ.. ಹಳ್ಳಿಯ ಮಕ್ಕಳಿಗೆಲ್ಲ ಅಲ್ಲಿಯೇ ಪಾಠ ನೆಡೆಯುತ್ತಿತ್ತು.. ಮಕ್ಕಳಿಗೆ ಆಟ ಪಾಠ ಎಲ್ಲವೂ ಅಲ್ಲಿಯೇ ನೆಡೆಯುತಿತ್ತು.. ಆ ಹಳ್ಳಿಯಲ್ಲಿ ಏನೇ ಸಮಾರಂಭ ನೆಡೆದರೂ, ವ್ಯಾಜ್ಯಗಳು ತೀರ್ಮಾನವಾಗಬೇಕು ಎಂದರೂ ಅದಕ್ಕೆ ಆಲದ ಮರವೇ ಸಾಕ್ಷಿ..

ಒಂದು ಸುಂದರ ಮುಂಜಾವು.. ಹಕ್ಕಿಗಳ ಕಲರವ .. ತಣ್ಣಗೆ ಹಿತವಾದ ಗಾಳಿ ಬೀಸುತಿತ್ತು.. ಊರಿನ ದನಕರುಗಳು ಮೇಯುವುದಕ್ಕೆ ಧೂಳೆಬ್ಬಿಸಿಕೊಂಡು ಹೊರಟಿದ್ದವು.. ಹಿತಮಿತವಾದ ಮಂಜು.. ಗಾಳಿ.. ಸೂರ್ಯನ ಕಿರಣಗಳು ಬರಲೋ ಬೇಡವೋ ಅನ್ನುವಂತೆ ಕಣ್ಣ ಮುಚ್ಚಾಲೆ ಆಡುತ್ತಿತ್ತು... ಒಮ್ಮೆ ಆ ವಾತಾವರಣದಲ್ಲಿದ್ದರೇ ಅಲ್ಲಿಯೇ ಇರಬೇಕು ಎನ್ನುವಂತಹ ಸ್ವರ್ಗದ ಅನುಭವ.. .

"ಕೇಳ್ರಪ್ಪೋ ಕೇಳ್ರಿ.. ಕೇಳ್ರಪ್ಪೋ  ಕೇಳ್ರಿ... ಇಂದು ಬೆಳಿಗ್ಗೆ ಹತ್ತು ಘಂಟೆಗೆ ಶ್ರೀಮತಿ ನಾಗಲಕ್ಷ್ಮಿ ಕಡೂರು ಅವರು ತಮ್ಮ ಆಂತರ್ಯದ ಮಾತುಗಳನ್ನು ಲೇಖನ ಮಾಡಿ ಅದನ್ನು ಪುಸ್ತಕ ಮಾಡಿದ್ದಾರೆ ಅದರ ಬಿಡುಗಡೆ ಇದೆ.. ಕೇಳ್ರಪ್ಪೋ ಕೇಳ್ರಪ್ಪೋ ಇದನ್ನು ಬಿಡುಗಡೆ ಮಾಡಲು ಬೆಮೆಲ್ ಸಂಸ್ಥೆಯ ಶ್ರೀ ಸೆಲ್ವಕುಮಾರ್  ಬರ್ತಾರೆ.. ಅವರ ಜೊತೆಯಲ್ಲಿ ಶ್ರೀಮತಿ ಪದ್ಮಾವತಿ ಚಂದ್ರು ಇರ್ತಾರೆ.. ಪುಸ್ತಕದ ಬಗ್ಗೆ ಮಾತಾಡೋಕೆ ಕೊಳ್ಳೇಗಾಲದ ಹೆಸರಿಗೆ ಇನ್ನಷ್ಟು ಮೆರುಗು ಕೊಟ್ಟ ಶ್ರೀ ಮಂಜುನಾಥ ಕೊಳ್ಳೇಗಾಲರವರು.. ಬಂದವರನ್ನು ಉದ್ದೇಶಿಸಿ ಮಾತಾಡಿ ಎಲ್ಲರಿಗೂ ಶುಭಕೋರೋಕೆ ೩ಕೆ ತಂಡದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್ ಇರ್ತಾರೆ... ಎಲ್ಲರೂ ಬನ್ರಪ್ಪ.. ಬನ್ರೀ.. "  ಡಂಗೂರ ಸಾರುವವ ಬಾಯಲ್ಲಿ ಬೀಡಿ ಕಚ್ಚಿಕೊಂಡು ಹೇಳಬೇಕಾದ ವಿಷಯವನ್ನು ತನ್ನದೇ ಶೈಲಿಯಲ್ಲಿ ಹೇಳುತ್ತಾ ಪ್ರತಿ ಬೀದಿಯಲ್ಲಿಯೂ ಸಾರುತ್ತಾ ಹೋದ. .



ಒಬ್ಬ ಹಿರಿಯಜ್ಜ.. "ಲೋ ಡಂಗೂರ ಸಾರುವ ಕಿಟ್ಟಾ.. ಒಸಿ ನಿಲ್ಲಲೇ ಲೇ..ಕಾರ್ಯಕ್ರಮ ಸರಿ ಊರಿನ ಮಂದಿ ಸೇರ್ತೀವಿ... ಏನಾದರೂ ಸ್ಪೆಷಲ್ ಇದೆಯಾ.. "

"ಅರೆ ಅಜ್ಜ.. ಅದರ ಬಗ್ಗೆ ಹೇಳೋದು ಮರೆತು ಹೋಯ್ತು... ಅದನ್ನ ಮತ್ತೆ ಸೇರಿಸಿ ಇನ್ನೊಮ್ಮೆ ಹೇಳ್ತೀನಿ... ಸರಿನಾ ಅಜ್ಜಾ"

"ಸರಿ ಕಣ್ಮಗ.. ಹಂಗೆ ಆಗಲಿ.. " ಅಜ್ಜ ಕೋಲೂರಿಕೊಂಡು ಹೆಜ್ಜೆ ಹಾಕುತ್ತಾ ಹೋದರು..

ಡಂಗೂರದ ಕಿಟ್ಟಾ  "ಕೇಳ್ರಪ್ಪೋ.. ಇವತ್ತಿನ ಕಾರ್ಯಕ್ರಮದ ಆರಂಭಕ್ಕೆ ಗಾನಕೊಗಿಲೆಗಳಾದ ಶ್ರೀ ಮಹೇಶ್ ಪ್ರಿಯದರ್ಶನ್ ಹಾಗೂ ಶ್ರೀಮತಿ ಶ್ರುತಿ ಅವರ ಹಾಡುಗಾರಿಕೆ ಇರುತ್ತೆ.. ಅವರಿಗೆ ಜೋತೆಯಾಗಿ ಕೀ ಬೋರ್ಡ್ ನುಡಿಸುತ್ತಾ ಶ್ರೀ ರವಿ ಅವರು ಹಾಗೂ ತಬಲಾದ ಜೊತೆ ಶ್ರೀ ಶ್ರೀನಿವಾಸ್ ಇರುತ್ತಾರೆ.. ನೀವೆಲ್ಲಾ ಹೆಚ್ಚು ಸದ್ದು ಮಾಡುತ್ತೀರಾ ಅದಕ್ಕೆ ಎಲ್ಲರಿಗೂ ಕೇಳಲಿ ಅಂತ ಮೈಕ್ ಎಲ್ಲ ತರ್ತಾರೆ..  ಅದನ್ನ ಶ್ರೀ ರಘು ಅವರ ಉಸ್ತುವಾರಿಗೆ ಕೊಟ್ಟಿರುತ್ತಾರೆ.. ಎಲ್ರೂ ಬನ್ರಪ್ಪ.. ನೀವೆಲ್ಲ ಬಂದರೆ ಈ ಕಾರ್ಯಕ್ರಮ ಸೊಗಸಾಗಿರುತ್ತೆ.. "




ಅವನ ಧ್ವನಿ ಕ್ಷೀಣವಾಗುತ್ತಾ ಹೋಯಿತು.. ಇಡೀ ಹಳ್ಳಿಯನ್ನ ಸುತ್ತಿ ಸುತ್ತಿ ಹೇಳಬೇಕಾಗಿತ್ತು..

ಹಳ್ಳಿಯ ಮಂದಿ ತಮ್ಮ ಬೆಳಗಿನ ದೈನಂದಿನ ಕೆಲಸವನ್ನು ಆಲದ ಮರದ ಕಡೆಗೆ ಹೆಜ್ಜೆ ಹಾಕುತ್ತ ಬಂದರು..

ಬಂದವರನ್ನು ಸ್ವಾಗತ ಮಾಡಿ ಆಲದ ಮರದ ಸುತ್ತಾ ಜಮಖಾನ ಮೇಲೆ ಕೂರಲು ಹೇಳಿದರು.. ಬಂದವರು ಮಾತು ಕಮ್ಮಿ ಮಾಡಿ.. ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕೂತರು..

" ಅಜಂ ನಿರ್ವಿಕಲ್ಪಂ ನಿರಾಕಾರ ಮೇಕಂ" ಗಣಪನ ಸ್ತುತಿ ಶ್ರೀಮತಿ ಶ್ರುತಿ ಗಾಯನದ ಆರಂಭ ಕಳೆಕೊಟ್ಟಿತು.. ತುಟಿಪಿಟಿಕ್ ಎನ್ನದೆ ಆಲದ ಮರದ ಸುತ್ತಾ ಕೈಮುಗಿದುಕೊಂಡು ಕೂತಿದ್ದರು...

ದೇವನಿಲ್ಲದ ಜಗ ಹೂವಿಲ್ಲದ ವನ ಎರಡೂ ಒಂದೇ.. ಭಕುತರು ಮುಂದೆ.. ದೇವ ನಮ್ಮ ಹಿಂದೆ ಎನ್ನುತ್ತಾ ಕೈಮುಗಿದು "ಭಕುತ ಜನ ಮುಂದೆ ನೀ ಅವರ ಹಿಂದೆ" ಎನ್ನುತ್ತಾ ಶ್ರೀ ಮಹೇಶ್ ಅವರು ಗಾಯನದ ಸಿರಿ ಅನುಭವಿಸಿದ ಮೇಲೆ ಜನರಿಗೆ ಕುತೂಹಲ ಜಾಸ್ತಿಯಾಯಿತು..

ಎಲ್ಲರ ಕಣ್ಣಲ್ಲಿ ಆನಂದಭಾಷ್ಪ.. ಅದನ್ನು ಧರೆಗಿಳಿಸಲು "ಇಳಿದು ಬಾ ತಾಯೆ ಇಳಿದು ಬಾ"  ಕುವೆಂಪುರವರ ಸಾಹಿತ್ಯ ಸಿರಿವಂತಿಗೆಯನ್ನು ಸಂಗೀತಕ್ಕೆ ಇಳಿಸಿದ್ದನ್ನು ಮತ್ತೊಮ್ಮೆ ಪ್ರಸ್ತುತ ಪಡಿಸಿದರು ಶ್ರೀ ಮಹೇಶ್ ಮತ್ತು ಶ್ರುತಿ..

ಬಂದಿದ್ದವರೆಲ್ಲ ಸುತ್ತ ಮುತ್ತಲು  ನೋಡುತ್ತಿದ್ದರು.. ಜನಸಾಗರವೇ ಸೇರುತ್ತಿತ್ತು.. ಕೂತಿದ್ದರು ಎಲ್ಲರ ತಾಳಕ್ಕೆ ಮನಸ್ಸು ಕುಣಿಯುತ್ತಿತ್ತು.. ಅಜ್ಜ ಸೇದುತ್ತಿದ್ದ ಬೀಡಿ ಬಿಸಾಕಿ.. "ಅಲ್ಲಲೇ ಜನಸಾಗರವೇ ಸೇರುತ್ತಿದೆ.. ಇದೇನು ಜನರ ಸಂತೆಯೋ.. ಕುರಿ ಸಂತೆಯೋ.. ಲೋ ಮಗ.. ಒಂದು ಕುರಿಗಳ ಮೇಲೆ ಒಂದು ಹಾಡು ಅಂಗೇ ಬಿಡು ಮಗ" ಎಂದು ಹೇಳಿದ ತಕ್ಷಣ.. ಶ್ರೀ ಮಹೇಶ್ "ಕುರಿಗಳು ಸರ್ ಕುರಿಗಳು" ಹಾಡನ್ನು ಶ್ರೀಮತಿ ಶೃತಿಯವರ ಕೋರಸ್ ಹಾಡಿನಲ್ಲಿ ಹಾಡಿಯೇ ಬಿಟ್ಟರು..

"ಪೇ ಪೇ. .ಆ ಆ" ಅಂತ ಒಂದು ಪುಟ್ಟ ಮಗು ಆಲದ ಮರದ ಬಿಳುಲು ಹಿಡಿದುಕೊಂಡು ಜೀಕಾಡುತ್ತಿತ್ತು.. ಆ ಸದ್ದಿಗೆ ಎಲ್ಲರೂ ಆ ಕಡೆ ತಿರುಗಿದಾಗ.. ಅವರ ಗಮನವನ್ನು ಮತ್ತೆ ಇತ್ತ ಸೆಳೆಯಲು ಶ್ರೀಮತಿ ಶೃತಿಯವರು "ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು" ಹಾಡು ಮೂಡಿ ಬಂದಾಗ ಆ ಮಗು ಸದ್ದು ಮಾಡದೆ ಸುಮ್ಮನೆ ಆಟವಾಡಲು ಶುರುಮಾಡಿತು.. !!!

ಡಂಗೂರದ ಕಿಟ್ಟಾ "ನೋಡ್ರಪ್ಪಾ.. ಇವತ್ತು ಪುಸ್ತಕ ಬಿಡುಗಡೆ ಆಗುತ್ತೆ.. ಅದರ ಕತೃ ನಾಗಲಕ್ಷ್ಮಿ ಕಡೂರು ಅವರು ರಚಿಸಿದ ಒಂದು ಪುಟ್ಟ ಕವಿತೆಯನ್ನು ಹಾಡಬೇಕು ಅಂತ ಈ ಅಜ್ಜನ ಆಸೆ.. ಅದಕ್ಕೆ ಶ್ರೀ ಮಹೇಶ್ ಚೊಕ್ಕವಾಗಿ ಸಂಗೀತ ಸೇರಿಸಿದ್ದಾರೆ ಅದನ್ನು ಈಗ ಪ್ರಸ್ತುತ ಮಾಡುತ್ತಾರೆ.. ಒಂದು ಚಪ್ಪಾಳೆ ಬರಲಿ"

ಕರತಾಡನ ಜೋರಾಯಿತು.. "ಭರಿಸಲಾರದ ಜೀವ ಬೇಡವಾದ ಜೀವ" ಎನ್ನುವ ಆಂತರ್ಯಕ್ಕೆ ತಾಕುವ ಹಾಡಿಗೆ ಎಲ್ಲರ ಪ್ರೋತ್ಸಾಹ ಸಿಕ್ಕಿತು..

ಅಜ್ಜ.. ಎದ್ದು ನಿಂತು. .ಜೋರಾಗಿ ಚಪ್ಪಾಳೆ ತಟ್ಟಿತು.. ಅಜ್ಜ ತನ್ನ ಜೇಬಿನಲ್ಲಿದ್ದ ಒಂದು ಪುಟ್ಟ ಚೀಟಿಯಲ್ಲಿ "ಮಹೇಶ ಮಗ ಆದರೆ ನೀ ಹಿಂಗ ನೋಡಬೇಡ ನನ್ನ"  ಪದವನ್ನು ಹಾಡೋಕೆ ಆಗುತ್ತಾ ಅಂತ ಬರೆದು ಕೊಡಬೇಕೆಂದು ಹೆಜ್ಜೆ ಹಾಕಿದಾಗ ಶ್ರೀ ಮಹೇಶ್ ರವರು "ಈಗ ಕಾರ್ಯಕ್ರಮದ ಕೊನೆಯ ಗೀತೆ ಬೇಂದ್ರೆ ಅಜ್ಜನ "ಶ್ರಾವಣ ಬಂತು ಕಾಡಿಗೆ ನಾಡಿಗೆ" ಹಾಡು.. ಈ ಹಾಡುಗಾರಿಕೆ ಮುಖ್ಯವಾದ ಕಾರ್ಯಕ್ರಮ ಅಲ್ಲ.. ಪುಸ್ತಕದ ಲೋಕಾರ್ಪಣೆ ಈ ಕಾರ್ಯಕ್ರಮದ ಉದ್ದೇಶ.. ಅದರ ಜೊತೆ ಇದು ಸೇರಿಕೊಂಡಿತು.. ಇದು ಶ್ರೀಮತಿ ನಾಗಲಕ್ಹ್ಮೀ ಕಡೂರು ಅವರ ಕೋರಿಕೆಯಾಗಿತ್ತು... ಇನ್ನೊಮ್ಮೆ ಸೇರೋಣ. ಎಲ್ಲಾ ರೀತಿಯ ಹಾಡುಗಳನ್ನು ಹಾಡೋಣ.. ನಲಿಯೋಣ.. " ಎಂದು ಹೇಳುತ್ತಾ ಶ್ರೀಮತಿ ಶೃತಿಯವರ ಜೊತೆಯಲ್ಲಿ ಹಾಡನ್ನು ಮುಗಿಸಿದಾಗ ಎಲ್ಲರೂ ಕರತಾಡನ ಮಾಡಿ ತಮ್ಮ ಸಂತಸ ವ್ಯಕ್ತಪಡಿಸಿದರು..

ಅಲ್ಲಿಯ ತನಕ ಆಲದ ಮರದಲ್ಲಿದ್ದ ಪಕ್ಷಿಸಂಕುಲಗಳು ಸುಮ್ಮನೆ ಕೂತು ಸಂಗೀತದ ಸ್ವಾಧವನ್ನು ಅನುಭವಿಸಿದವು..

ಎಲ್ಲರ ಮನಸ್ಸು ತಣಿಯಿತು....

ಎಲ್ಲರಿಗೂ ಕಾಫಿ ಟೀ ವ್ಯವಸ್ಥೆ ಇದೆ.. ಒಂದು ಹತ್ತು ನಿಮಿಷ ವಿರಮಿಸಿ ಎಂದು ಡಂಗೂರದ ಕಿಟ್ಟಾ ಹೇಳಿದ..

ಹತ್ತು ಹದಿನೈದು ನಿಮಿಷ.. ಮತ್ತೆ ಶುರುವಾಯಿತು..

ಅಜ್ಜ.. ನೋಡ್ರಪ್ಪಾ ಈಗ ಕಾರ್ಯಕ್ರಮ ಶುರು ಆಗುತ್ತೆ.. ನಾವೆಲ್ಲರೂ ಈ ಕರುನಾಡಲ್ಲಿ ಇದ್ದೀವಿ.. ನಮ್ಮ ರಾಷ್ಟ್ರಕವಿ ರಚಿಸಿದ ನಾಡಗೀತೆ ಹೇಳುತ್ತಾ ಶುರು ಮಾಡೋಣ ಅಂದ್ರು..

ಎಲ್ಲರೊ ಎದ್ದು ನಿಂತು "ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಹಾಡನ್ನು ಎಲ್ಲರೂ ಹೇಳಿದರು.. ಅದರ ಮುಖ್ಯ ಧ್ವನಿಯಾಗಿದ್ದು ಶ್ರೀ ಮಹೇಶ್ ಮತ್ತು ಶ್ರೀಮತಿ ಶ್ರುತಿಯವರು..

ಆಕಾಶವಾಣಿಯ ಉದ್ಘೋಷಕರ ಸುಂದರ ಧ್ವನಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ಹೇಳಿದರು.. ನಂತರ ಶ್ರೀ ಸುಬ್ರಮಣ್ಯಭಟ್ ಅವರು ಕಾರ್ಯಕ್ರಮದ ಬಗ್ಗೆ ಮತ್ತು ನೆರೆದಿದ್ದ ಗಣ್ಯರ ಬಗ್ಗೆ ಸುಮಧುರ ನುಡಿಗಳಲ್ಲಿ ಹೇಳಿದ ಮಾತುಗಳು ಕಾರ್ಯಕ್ರಮಕ್ಕೆ ಅಡಿಪಾಯ ಒದಗಿಸಿದವು..

ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರ ಅಮೃತ ಹಸ್ತದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.. ಕೇಂದ್ರ ಬಿಂದು.. . ಪುಸ್ತಕ ಬಿಡುಗಡೆಯಾಯಿತು..


ತನ್ನ ಗೆಳತಿ ಶ್ರೀಮತಿ ನಾಗಲಕ್ಷ್ಮಿ ಕಡೂರು ಅವರ ಪುಟ್ಟ ಪರಿಚಯ.. ಅವರ ಜೊತೆಯ ಒಡನಾಟ.. ಅವರ ಪುಸ್ತಕದ ಬಗ್ಗೆ ಒಂದು ಮಾತು ಹೇಳುತ್ತಾ.. ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಶ್ರೀಮತಿ ರೂಪ ಸತೀಶ್..

ನಂತರ ಲೇಖಕಿ ಶ್ರೀಮತಿ ನಾಗಲಕ್ಷ್ಮಿ ಕಡೂರು ಅವರು ಆಂತರ್ಯ ಮೂಡಿದ ರೀತಿ ಅದಕ್ಕೆ ಸಿಕ್ಕ ಸ್ಫೂರ್ತಿ.. ಈ ಹೊತ್ತಿಗೆಗೆ  ಜೊತೆಯಾದವರನ್ನು ನೆನೆಯುತ್ತ.. ಆಂತರ್ಯದ ಆಂತರ್ಯವನ್ನು ತೆರೆದಿಟ್ಟರು..

ಶ್ರೀಮತಿ ಪದ್ಮಾವತಿ ಚಂದ್ರು ಅವರು ಚುಟುಕು ಹೇಳುತ್ತಾ ಸೇರಿದ್ದವರನ್ನು ನಗೆಯಲ್ಲಿ ತೇಲಿಸಿದರು.. ಜೊತೆಯಲ್ಲಿ ಪುಸ್ತಕದ ಆಂತರ್ಯದ ಹೂರಣವನ್ನು ಬಡಿಸಿದರು..

ಶ್ರೀ ಬೆಮೆಲ್  ಶ್ರೀ ಸೆಲ್ವಕುಮಾರ್    ಆವರ ಪ್ರಾಸ್ತಾವಿಕ ಮಾತುಗಳು ಕಾರ್ಯಕ್ರಮಕ್ಕೆ ಹಿಡಿದ ಕನ್ನಡಿಯಾಗಿತ್ತು.. ಹಿತಮಿತವಾದ ಮಾತುಗಳು ಖುಷಿಯಾಗಿತ್ತು..

ಪುಸ್ತಕದ ಬಗ್ಗೆ ಶ್ರೀ ಮಂಜುನಾಥ್ ಕೊಳ್ಳೇಗಾಲ ಮಾತುಗಳು.. ಅವರ ಜ್ಞಾನ ಭಂಡಾರವನ್ನೇ ತೆಗೆದು.. ಉಣ ಬಡಿಸಿದರು.. ಅವರ ವ್ಯಕ್ತಿತ್ವ.. ಅವರ ಜ್ಞಾನ.. ಅವರ ಮನಸ್ಸೆಳೆಯುವ ಮಾತುಗಾರಿಕೆ ಆಹಾ ಕರ್ಣಾನಂದಕರ..

ಹಳ್ಳಿಯ ಬೆಳಗಿನ ಹೊತ್ತು ಸಾರ್ಥಕವಾಗಿ ಕಳೆದ ಖುಷಿ ಎಲ್ಲರದು.. ಅಜ್ಜ ಮತ್ತೊಮ್ಮೆ ಕೂಗಿತು.. "ಎನ್ರಪ್ಪ.. ಎಲ್ಲರೂ ಹೊರಡುವ ಮುಂಚೆ ಈ ಕಾರ್ಯಕ್ರಮ ಹೇಗಿತ್ತು.. ಅಂತ ಹೇಳ್ರೋ.. "

ಎಲ್ಲರೂ ಎದ್ದು ನಿಂತು.. ಹೆಬ್ಬೆರಳನ್ನು ಮೇಲೆ ಎತ್ತಿದರು.. ಅಜ್ಜನಿಗೆ ಖುಷಿಯೋ ಖುಷಿಯೋ.. ಅಜ್ಜ ತನ್ನ ಜೇಬಿನಿಂದ ಬೀಡಿಯ ಕಟ್ಟು ತೆಗೆದು.. ಒಂದು ಬೀಡಿ ಹಚ್ಚಿಕೊಂಡು ಮೆಲ್ಲನೆ ಕೋಲೂರಿಕೊಂಡು ಹೆಜ್ಜೆ ಹಾಕುತ್ತ ಹೋಯಿತು..

ಡಂಗೂರದ ಕಿಟ್ಟಾ "ಇಂದಿನ ಪುಟ್ಟ ಕಾರ್ಯಕ್ರಮಕ್ಕೆ ಬಂದಿದ್ದ ನಿಮಗೆಲ್ಲ ಧನ್ಯವಾದಗಳು.. ಇಂದಿನ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಎದುರಿಗೆ ಇರುವ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಹಚ್ಚುತ್ತೇನೆ ಎಲ್ಲರೂ ನೋಡಿ ಆನಂದಿಸಿ..
ಜೊತೆಯಲ್ಲಿ ಕರುನಾಡ ಭಾವುಟದ ಧ್ವಜದ ಕಟ್ಟೆಯ ಮೇಲೆ ಈ ಪುಸ್ತಕಗಳನ್ನು ಇಟ್ಟಿರುತ್ತೇನೆ ಎಲ್ಲರೂ ಕೊಂಡುಕೊಳ್ಳಿ ಓದಿ ಸಂಭ್ರಮಿಸಿ..ಇನ್ನೊಂದು ಮಾತು ರವಿವಾರದ ದಿನ ಎಲ್ಲರೂ ಬಂದಿದ್ದೀರಿ.. ಕಿವಿಗೆ ಇಂಪಾದ ಹಾಡುಗಳು ಆಯ್ತು... ಹೃದಯಕ್ಕೆ ತಾಗುವ ಬರಹದ ಸಿಕ್ಕಿತು.. ಮತ್ತೆ ಉದರಕ್ಕೆ ನಿಮಗೆ ಇಷ್ಟವಾದ ಪುಳಿಯೋಗರೆ, ಮೊಸರನ್ನ, ಜಿಲೇಬಿ, ಮೆಣಸಿನಕಾಯಿ ಬಜ್ಜಿ, ಹೆಸರುಕಾಳಿನ ಖಾದ್ಯ ಸಿದ್ಧವಾಗಿದೆ.. ದಯಮಾಡಿ ಎಲ್ಲರೂ ಭೋಜನ ಮಾಡಿಕೊಂಡೆ ಹೋಗಬೇಕು ಇದು ಶ್ರೀಮತಿ ನಾಗಲಕ್ಷ್ಮಿ ಅವರ ಕುಟುಂಬದ ಅಪೇಕ್ಷೆ, ಆಶಯ ಮತ್ತು ಆದೇಶ .. !"

ಎಲ್ಲರಿಗೂ ಶುಭವಾಗಲಿ..