Thursday, July 11, 2013

ಸಡಗರದಿಂದಾ ಗಗನದ ಅಂಚಿಂದ........!

ಭಕ್ತ ಅಂಬರೀಷ ತನ್ನ ರಾಜ್ಯದ ಹಿತಕ್ಕಾಗಿ ಮಳೆಯಿಲ್ಲದೆ ಬೆಂಡಾಗಿದ್ದ ಇಳೆಯನ್ನು ತಣಿಸುವುದಕ್ಕಾಗಿ, ಮಳೆಯನ್ನು ಸುರಿಸಲು ಇಂದ್ರಾದಿದೇವತೆಗಳಿಗೆ ಮೊರೆ ಹೊಕ್ಕು ಬೃಹತ್ ಯಜ್ಞವನ್ನು ಕೈಗೊಂಡಿದ್ದ.. ವರುಣ ದೇವನನ್ನು ತೃಪ್ತಿ ಪಡಿಸಲು ಯಜ್ಞದ ಹವ್ವಿಸ್ಸಿನ ಜೊತೆಯಲ್ಲಿ ಮಂತ್ರಗಳು, ಶ್ಲೋಕಗಳು, ಹಾಡುಗಳು ಎಲ್ಲವೂ ಮೇಳೈಸಿದ್ದವು....

ಯಜ್ಞ ಕುಂಡದಲ್ಲಿ ಅಗ್ನಿ ದೇವ ಪ್ರತ್ಯಕ್ಷನಾಗಿದ್ದ.. ತುಪ್ಪ, ಸಮಿತ್ತುಗಳು ಹೇರಳವಾಗಿ ಗಾಡಿಗಟ್ಟಲೆ ಕುಂಡದ ಸುತ್ತಾ ರಾಶಿ ಬಿದ್ದಿದ್ದವು .. ಹೋತ್ರಿಗಳು ಭಕ್ತಿ ಪರವಶರಾಗಿ  ಮಂತ್ರಗಳನ್ನು ಪಠಣ ಮಾಡುತ್ತಿದ್ದರು. ವೇದಮಂತ್ರಗಳ ಘೋಷಗಳು  ಅಂಬರ ಮುಟ್ಟುತ್ತಿತ್ತು..

ಯಾಗ ಮಾಡುತ್ತಲೇ ಭಕ್ತ ಅಂಬರೀಷ ದೇವತೆಗಳನ್ನು ಮೆಚ್ಚಿಸಲು ಅನೇಕ ಪದ್ಯಗಳನ್ನು, ಸುಂದರ ಕವನಗಳನ್ನು ಹಾಡಲು ಶುರುಮಾಡಿದ ...

"ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದಾ ಗಗನದ ಅಂಚಿಂದ
ಆ….ಆ….ಆ….ಆ…
ಸಡಗರದಿಂದಾ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ"

ಹಾಡಿನ ಗಾಯನ, ಪದಗಳ ಜೋಡಣೆ, ರಾಗ ಎಲ್ಲವೂ ದೇವತೆಗಳನ್ನು ಮಂತ್ರ ಮುಗ್ಧರನ್ನಾಗಿಸಿತು. ಬೇರೆ ದಾರಿ ಕಾಣದೆ ಭುವಿಗಿಳಿದು ಬಂದರು..

"ಭಕ್ತ ಅಂಬರೀಷ.. ನಿನ್ನ ಗಾನ ಸುಧೆ, ನಿನ್ನ ಪರಿಶ್ರಮ, ಯಜ್ಞ ಯಾಗಾದಿಗಳಿಂದ ನಮ್ಮನ್ನು ತೃಪ್ತಿ ಪಡಿಸಿದ್ದೀಯ.. ನಿನಗೆ ಏನು ವರ ಬೇಕೋ ಕೇಳಿಕೋ"

"ದೇವತೆಗಳೇ.. ನಿಮ್ಮ ಆಗಮನದಿಂದ ನನ್ನ ಹಾಗು ನಾಡಿನ ಪ್ರಜೆಗಳ ಜನ್ಮ ಪಾವನವಾಯಿತು .ನನ್ನ ಭಾಗ್ಯ ನಿಮ್ಮನ್ನು ನೋಡಲು ಸಾಧ್ಯವಾಗಿದ್ದು.. ನನ್ನ ಬೇಡಿಕೆಗಳು ಬಹಳ ಸರಳ... ಈ ಯಜ್ಞ ಯಾಗಾದಿಗಳಿಂದ ಸಂತೃಪ್ತರಾಗಿ ವರುಣ ಮಳೆರಾಯನನ್ನು ಖಂಡಿತ ಕಳಿಸುತ್ತಾನೆ.. ಆ ನಂಬಿಕೆ ಇದೆ ಎನಗೆ.. ಅದು ಬಿಟ್ಟು ಬೇರೆ ವರ ಕೇಳಲೇ"

"ಅಗತ್ಯವಾಗಿ ಭಕ್ತ.. ನಿನ್ನ ಭಕ್ತಿಗೆ ಮೆಚ್ಚಿದ್ದೇವೆ ಏನೇ ಕೇಳಿದರೂ ಅದು ಸಿಗುತ್ತದೆ"

"ಮೊದಲನೆಯ ವರ.... ನೋಡಿ ಇದುವರೆವಿಗೂ ನಾ ಹಾಡಿದ ಅನೇಕ ಕವಿತೆಗಳನ್ನು ಬರೆದಿರುವ,  ಭಾರತ ಮಾತೆಯ ಪುಣ್ಯಕ್ಷೇತ್ರದ ಹೆಸರಾದ,  ನಮ್ಮ ಆಸ್ಥಾನ ಕವಿ ಬದರಿನಾಥರ ಮೇಲೆ.... ಶ್ರೀ ಬದರಿನಾಥನ ಅನುಗ್ರಹ ನಮ್ಮ  ಸದಾ ಇರಬೇಕು..  "

"ತಥಾಸ್ತು"

"ಎರಡನೆಯ ವರ.... ಪ್ರತಿವಾರವೂ ಬರೆಯುವ,  ಲೋಕದಲ್ಲಿ ನಡೆಯುವ ಘಟನೆಗಳ,  ಕವಿತೆಗಳು ಎಲ್ಲಾ ಕಡೆಯೂ ಸಿಗುವಂತಾಗಬೇಕು"

"ತಥಾಸ್ತು"

"ಮೂರನೆಯ ವರ....  ಮುದ್ರಣಗೊಂಡ ಇವರ ಕವಿತೆಗಳ ಹೊತ್ತಿಗೆ... ವಿಶ್ವದಗಲಕ್ಕೂ ಪಸರಿಸಿ ಕೊಲ್ಲಾಪುರದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ದೇವಿಯೂ ಇವರ ಮನೆಯಲ್ಲಿ ಸದಾ ನಗು ನಗುತ್ತಿರಬೇಕು"

"ತಥಾಸ್ತು.. ಭಕ್ತ ಅಂಬರೀಷ.. ನಿನಗಾಗಿ ನಿನ್ನ ನಾಡಿನ ಜನತೆಗಾಗಿ ಏನು ಕೇಳಲಿಲ್ಲ... ಬದಲಿಗೆ ಸುಂದರ ಮನಸ್ಸಿನ ಬದರಿನಾಥರ ಬಗ್ಗೆ ಎಲ್ಲವನ್ನು ಕೇಳಿದೆ.. ಏನು ಇದಕ್ಕೆ ಕಾರಣ?"

"ದೇವತೆಗಳೇ.. ನನ್ನಿಂದ ನಡೆಸಿದ ಯಜ್ಞ ಯಾಗಾದಿಗಳಿಂದ ತೃಪ್ತಿ ಹೊಂದಿ ನನ್ನ ನಾಡನ್ನು ಪ್ರಜೆಗಳನ್ನು ಹರಸುತ್ತೀರಾ.. ಆ ವಿಷಯ ನಾ ಬಲ್ಲೆ..ಆದರೆ ಇಂತಹ ಒಬ್ಬ ಸಹೃದಯಿ ಗೆಳೆಯನನ್ನು ಹೊಂದಿರುವ ಹದಿನೈದನೆ ಲೋಕ ಬ್ಲಾಗ್ ಲೋಕದಲ್ಲಿ, ವಿಶಿಷ್ಟ ಪ್ರತಿಭೆಯಿಂದ,  ತನ್ನ ಕವಿತೆಗಳ ಮೂಲಕ ಜಗದಗಲ ನಡೆಯುತ್ತಿರುವ ವಿಷಯಗಳನ್ನು ಸುಂದರ ಪದಗಳಲ್ಲಿ ನೇಯ್ದು ಬರೆಯುತ್ತಿರುವ ಕವಿತೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ. ಅದನ್ನು ಎಲ್ಲರೂ ಜತನದಿಂದ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಲು ಸದಾ ಓದಲು ಮುದ್ರಣಗೊಂಡ ಪ್ರತಿಗಳ ರೂಪದಲ್ಲಿ ಎಲ್ಲರನ್ನು ಸೇರಬೇಕು ಹಾಗೆಯೇ ಮಹಾವಿಷ್ಣುವಿನ ಹಾಗೂ ಶ್ರೀ ಲಕ್ಷ್ಮಿಯ ಕೃಪೆ ಸದಾ ಇರಬೇಕು.. ಅದಕ್ಕಾಗಿಯೆ ನಮ್ಮ ಆಸ್ಥಾನದ ಕವಿ ಬದರಿನಾಥರ ಬಗ್ಗೆ ವರಗಳನ್ನು ಕೇಳಿದ್ದು"

"ತಥಾಸ್ತು.. ನಿನ್ನ ಮಾತಿಗೆ ಮೆಚ್ಚಿದ್ದೇವೆ.. ಅಂಬರೀಷ ನಿನ್ನ ನಾಡು, ಜನತೆ ಸುಭೀಕ್ಷವಾಗಿರುವುದು ಅಷ್ಟೇ ಅಲ್ಲದೆ ನಿನ್ನ ಎಲ್ಲಾ ಆಸೆ ಆಕಾಂಕ್ಷೆಗಳು ಸಂಪೂರ್ಣವಾಗಿ ನೆರವೇರಲಿ ಹಾಗೆ ಬದರಿನಾಥರ ಎಲ್ಲ ಕವಿತೆಗಳು ಎಲ್ಲರ ಮನೆ ಮನ ಮುಟ್ಟಲಿ ಶ್ರೀ ವಿಷ್ಣುವಿನ ಹಾಗೂ ಮಹಾಲಕ್ಷ್ಮಿಯ ಅನುಗ್ರಹ ಸದಾ ಅವರ ಕುಟುಂಬದ ಮೇಲಿರಲಿ" ಎಂದು ಹೇಳಿ ದೇವತೆಗಳು ಅಂತರ್ದಾನರಾದರು...

ಭಕ್ತ ಅಂಬರೀಷನ ಕಣ್ಣಲ್ಲಿ ಧಾರಾಕಾರವಾಗಿ ಹರಿಯುತಿದ್ದ ಆನಂದ ಭಾಷ್ಪ.. ಪಕ್ಕದಲ್ಲೇ ವಿನೀತರಾಗಿ ನಿಂತಿದ್ದ ಬದರಿನಾಥರು ಸಂತಸದಲ್ಲಿ ಆನಂದಭಾಷ್ಪದ ಮಜ್ಜನದಲ್ಲಿ ತೋಯ್ದು ತೊಪ್ಪೆಯಾಗಿದ್ದರು.

"ಅಂಬರೀಷ ಮಹಾಪ್ರಭು ನಿಮ್ಮ ಆಶೀರ್ವಾದಕ್ಕೆ ನಾ ಏನು ಹೇಳಲಿ... ನಿಮ್ಮ ಒಲುಮೆ ಸದಾ ಹೀಗೆ ಇರಲಿ.. ನನ್ನ ಕವಿತೆಗಳನ್ನು ಓದಿ, ನಲಿದು, ಹಾಡಿ  ಹರಸಿದ್ದೀರ.. ನಿಮ್ಮ ಒಲುಮೆಗೆ ನಾ ಶರಣಾದೆ"

"ಬದರಿನಾಥ.. ನೀವು ಸುಂದರ ಮನದ ಕವಿಗಳು ನಿಮ್ಮ ಒಲುಮೆ, ಗೆಳೆತನ ಬ್ಲಾಗ್ ಲೋಕದ ಒಂದು ಶಕ್ತಿ.. ದೇವತೆಗಳೇ ನಿಮಗೆ ಹರಸಿ ಹೋಗಿದ್ದಾರೆ.. ಇನ್ನು ನಿಮಗೆ ಯಾವ ಆತಂಕವೂ ಇರುವುದಿಲ್ಲ.. ಇಂದಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ತೇಲಾಡಿ ಈಜಾಡಿ ಆನಂದಿಸಿ.. ನಿಮ್ಮ ನಗು ಸದಾ ನಿಮ್ಮ ಮುಖದಲ್ಲಿರಲಿ... ಹುಟ್ಟು ಹಬ್ಬದ ಶುಭಾಶಯಗಳು ಬದರಿನಾಥ" ಎಂದು ಮತ್ತೊಮ್ಮೆ ಭಕ್ತ ಅಂಬರೀಷ ಹೇಳಿದಾಗ ಬದರಿನಾಥರ ಮೊಗದಲ್ಲಿ ಹೇಳಲಾರದ ಸಂತಸ ಗಂಗೆಯಾಗಿ ಹೃದಯದ ಲೋಕದಿಂದ ಕಣ್ಣಿನ ಲೋಕದ ಮಾರ್ಗವಾಗಿ ಧರಣಿಗೆ ತಲುಪಿದಳು..

"ಇಂತಹ ಪ್ರಭುಗಳನ್ನು ಪಡೆದ ನಾನೆ ಧನ್ಯ.. ಬ್ಲಾಗ್ ಲೋಕದ ತಾರೆಗಳ ಆಶೀರ್ವಾದದಿಂದ,  ನೀವು ದೇವತೆಗಳಿಂದ ಕರುಣಿಸಿದ ವರದ ಆಶೀರ್ವಾದದ ಬಲದಿಂದ ಇನ್ನಷ್ಟು ಕವನಗಳು ಹೊರಬರಲು ಸಹಾಯವಾಗುತ್ತದೆ... "


"ಬದರಿನಾಥ ಶುಭವಾಗಲಿ.. ನಿಮ್ಮ ಕನಸೆಲ್ಲ ನನಸಾಗಲಿ.. ಮುದ್ರಿತಗೊಂಡ ಒಂದು ಪ್ರತಿಯನ್ನು ಈ ವಿಳಾಸಕ್ಕೆ ತಪ್ಪದೆ ಕಳಿಸಬೇಕು.. ಅಲ್ಲಿಯೇ ನಾ ಕಾಯುತ್ತಿರುವೆ"

"ಭಕ್ತ ಅಂಬರೀಷ"
ಅರಮನೆ ಮನೆ ಸಂಖ್ಯೆ : ಓಂ
ಲೇಖನಗಳ ಮುಖ್ಯ ರಸ್ತೆ
ಕವನಗಳ ಬೀದಿ
ಕಥಾಸಾಗರ
ಬ್ಲಾಗ್ ಲೋಕ
ವಸುಂಧರೆ

"ಖಂಡಿತ ಮಹಾಪ್ರಭು... ಖಂಡಿತ ಕಳಿಸುವೆ.. ಹಾಗೆಯೇ ನನ್ನ ಜನುಮದಿನಕ್ಕೆ ನೀವು ಕರುಣಿಸಿದ ವರದ ಮೂಟೆ ಸಿಹಿಯಾದ ಸಕ್ಕರೆ ಮೂಟೆ... !"

***********************

ಬ್ಲಾಗ್ ಲೋಕದ ಸಮಸ್ತ ಜನತೆಗಳ ಪರವಾಗಿ ಹಬ್ಬದ ಶುಭಾಶಯಗಳು ಬದರಿ ಸರ್.. ನಿಮ್ಮ ಕನಸೆಲ್ಲ ಹಕ್ಕಿಯಾಗಿ ಹಾರಿ ಹೊಸ ಹೊಸ ಕನಸುಗಳ ಜೊತೆ ನನಸಾದ ಸಡಗರ ಸಂಭ್ರಮಗಳನ್ನು ತರಲಿ.. ಶುಭವಾಗಲಿ"

 ಶುಭಮಸ್ತು 

*************************